ರೇಷ್ಮೆ ಉತ್ಪಾದಕರ ಕಂಪನಿ ಆರೋಪ ನಿರಾಧಾರ
ಕೋಲಾರ,ಜು.೬- ಕೋಲಾರ ರೇಷ್ಮೆ ಉತ್ಪಾದಕ ಕಂಪನಿಯ ಬೆಳವಣಿಗೆ ಸಹಿಸಲಾಗದೆ ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ನಡುಪಳ್ಳಿ ಕೃಷ್ಣಮೂರ್ತಿ ಕಂಪನಿ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರ ಎಂದು ಕಂಪನಿ ಅಧ್ಯಕ್ಷ ಬಳಗೆರೆ ಶಂಕರೇಗೌಡ ಸ್ಪಷ್ಟೀಕರಣ ನೀಡಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಂಪನಿ ಮೇಲೆ ಮಾಡಿರುವ ಆರೋಪ ಅವರ ವೈಯಕ್ತಿಕ ವಿಚಾರ. ಕಂಪನಿ ಕಡೆಯಿಂದ ತಮಗೆ ಯಾವುದೇ ಲಾಭವಿಲ್ಲದ ಕಾರಣ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅವರೇ ಹೇಳಿರುವ ಹಾಗೆ ಪ್ರತಿ ತಿಂಗಳು ಆಡಳಿತ ಮಂಡಳಿಯ ಸಭೆ ನಡೆಸಿ ಸಭೆಯಲ್ಲಿ ನಿರ್ದೇಶಕರ ಸಮ್ಮುಖದಲ್ಲಿ ಕಂಪನಿಯ ಲೆಕ್ಕಪತ್ರಗಳನ್ನು ಮಂಡಿಸಿ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ನೀಡಿ ನಿರ್ದೇಶಕರಿಂದ ಸಹಿ ಪಡೆಯಲಾಗುತ್ತಿದೆ ಎಂದರು.
ಇಲಾಖೆ ಮಾರ್ಗದರ್ಶನದಂತೆ ಲೆಕ್ಕಪರಿಶೋಧಕರ ಸೂಚನೆಯಂತೆ ನಿರ್ದೆಶಕರ ಮಂಡಳಿ ಮತ್ತು ಸರ್ವ ಸದಸ್ಯರ ಸಭೆಗಳನ್ನು ನಡೆಸಲಾಗಿದೆ ಎಂದು ವಿವರಿಸಿದರು.
ಹಣದ ಆರೋಪ ಮಾಡಿರುವ ಬಗ್ಗೆ ೧೨೮೪೫೦೦ ರೂ ಅನುದಾನ ಬಿಡುಗಡೆಯಾಗಿರುವುದು ನಿಜ. ಅದರಲ್ಲಿ ಸರ್ಕಾರದ ಮಾರ್ಗದರ್ಶನದಂತೆ ಎರಡು ವರ್ಷಗಳ ಸಿಬ್ಬಂದಿ ವೇತನ (ಮೇ ೨೦೨೩ರವರೆಗೆ) ೮೫೨೦೦೦ ರೂ ನೀಡಲಾಗಿದ್ದು, ಉಳಿಕೆ ೪,೫ ಲಕ್ಷ ರೂ ಅನುದಾನ ಸುತ್ತ್ತು ನಿಧಿಯಾಗಿದ್ದು, ಷೇರು ಹಣ ೧೦ ಲಕ್ಷ ಮೂಲ ಬಂಡವಾಳದಲ್ಲಿ ಸಂಸ್ಥೆಯ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಂಡು ಪ್ರತಿವರ್ಷ ಹಂತಹಂತವಾಗಿ ಲಾಭದಾಯಕದತ್ತ ಹೆಜ್ಜೆ ಹಾಕುತ್ತಿದೆ. ಜಿಲ್ಲೆಯಲ್ಲಿ ಮಾದರಿ ಸಂಸ್ಥೆಯಾಗಿ ರೇಷ್ಮೆ ಇಲಾಖೆಯಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಸಂಸ್ಥೆಯಲ್ಲಿ ಟ್ರ್ಯಾಕ್ಟರ್ ಖರೀದಿ ಮಾಡಲಾಗಿದ್ದು, ಆರೋಪ ಮಾಡಿರುವ ಕೃಷ್ಣಮೂರ್ತಿಯವರೇ ೬ ತಿಂಗಳು ಬಳಕೆ ಮಾಡಿ ಅದನ್ನು ನಿರ್ವಹಿಸಲಾಗದೆ ಕಂಪನಿಗೆ ವಾಪಸ್ ನೀಡಿರುತ್ತಾರೆ, ತದನಂತರ ಯಾರು ಸಹ ಆಸಕ್ತಿ ವಹಿಸದ ಕಾರಣ ನಿರ್ದೇಶಕ ಮಂಡಳಿ ತೀರ್ಮಾನದಂತೆ ಅಧ್ಯಕ್ಷರ ಸುಪರ್ದಿಗೆ ನೀಡಿ ೩೦,೦೦೦ ಆದಾಯವನ್ನು ಸಂಸ್ಥೆಗೆ ನೀಡಿ ಜನವರಿಯಲ್ಲಿ ನಿರ್ದೇಶಕ ನಂಜೇಗೌಡರಿಗೆ ನೀಡಲಾಯಿತು. ಚಾಲಕರ ಕೊರತೆಯಿಂದ ಹಾಗೂ ರೇಷ್ಮೆ ಬೆಳೆಗಾರರು ಉಪಯೋಗಿಸಿಕೊಳ್ಳುವಂತೆ ನಿರ್ದೇಶಕರ ಮಂಡಳಿ ತಿಳಿಸಲಾಗಿರುತ್ತದೆ. ಟ್ರಾಕ್ಟರ್ ಕಂಪನಿಯ ಚಿರಾಸ್ತಿಯಾಗಿದ್ದು, ಅದನ್ನು ಯಾವುದೇ ರೀತಿಯಲ್ಲಿ ದುರುಪಯೋಗಪಡಿಸಿಕೊಂಡಿಲ್ಲ ಎಂದು ಹೇಳಿದರು.
ಕೋಲಾರ ರೇಷ್ಮೆ ಉತ್ಪಾದಕ ಕಂಪನಿಗೆ ರಾಜ್ಯಾದ್ಯಂತ ಹಾಗೂ ಅಂತರರಾಜ್ಯ ಕಂಪನಿಗಳು ನಿರಂತರವಾಗಿ ಬೇಟಿ ನೀಡಿ ಸಂಸ್ಥೆಯ ಬಗ್ಗೆ ಪ್ರಶಂಸೆ ನೀಡಿದ್ದಾರೆ. ಇಲಾಖಾ ಮಟ್ಟದ ಉನ್ನತ ಅಧಿಕಾರಿಗಳು ಸಹ ತನಿಖೆ ನಡೆಸಿ ಕೋಲಾರ ರೇಷ್ಮೆ ಉತ್ಪಾದಕ ಕಂಪನಿಯು ಮಾದರಿಯಾಗಿದೆ ಎಂದು ಪ್ರಶಂಸಿಸಿದ್ದಾರೆ ಇದನ್ನು ಸಹಿಸಲಾಗದ ಕೃಷ್ಣಮೂತಿ ಕಂಪನಿಯ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.