ಕೌಶಲ್ಯಕ್ಕೆ ಸ್ಕೌಟ್ಸ್, ಗೈಡ್ಸ್ ಶಿಕ್ಷಣ ಸಹಕಾರಿ
ಕೋಲಾರ ಜು,೬- ಸ್ಕೌಟ್ಸ್ ಗೈಡ್ಸ್ ಶಿಕ್ಷಣದಿಂದ ತಮ್ಮ ಭವಿಷ್ಯದ ಜೀವನಕ್ಕೆ ಬೇಕಾದ ಕೌಶಲಗಳನ್ನು ಹೆಚ್ಚಿಸಿಕೊಂಡು ಉತ್ತಮ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಜಿಲ್ಲಾ ಸ್ಕೌಟ್ ಆಯುಕ್ತ ಕೆ.ಆರ್.ಸುರೇಶ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ವಡಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಬ್ ಬುಲ್ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬಾಣಸಿಗ ಪದಕ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿ ಸ್ಕೌಟ್ಸ್ ಗೈಡ್ಸ್ ಶಿಕ್ಷಣ ಬಾಲ್ಯದಲ್ಲಿ ಕಲಿತ ಅಂಶಗಳು ತಾವು ದೊಡ್ಡವರಾದ ಮೇಲೆ ತಮಗೆ ಈ ಕೌಶಲಗಳು ಬಳಕೆಗೆ ಬರಲಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತಮವಾಗಿ ಭಾಗವಹಿಸಿ ಜೀವನ ಕೌಶಲಗಳನ್ನು ವೃದ್ದಿಸಿಕೊಳ್ಳಬೇಕು. ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಪೋಷಕರು ಸ್ಕೌಟ್ಸ್ ಗೈಡ್ಸ್ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ ಜಿಲ್ಲೆಯಲ್ಲಿ ಮಾದರಿ ಶಾಲೆಯಾಗಿದೆ. ಎಲ್ಲಾ ಶಾಲೆಗಳಲ್ಲಿ ಇದೇ ರೀತಿಯ ಶಿಕ್ಷಣ ಸಿಗುವಂತಾಗಬೇಕು ಎಂದು ಆಶಿಸಿದರು.
ಜಿಲ್ಲಾ ಸಹಕಾರ್ಯದರ್ಶಿ ಸ್ಕೌಟ್ ಬಾಬು ಮಾತನಾಡಿ ಈ ಸಂಸ್ಥೆಯ ಶಿಕ್ಷಣದಲ್ಲಿ ಭಾಗವಹಿಸಿದ ಮಕ್ಕಳು ಅದೃಷ್ಠವಂತರು, ತಾವು ಆಟ ಆಡುವ ಮೂಲಕ ತಮ್ಮ ಭವಿಷ್ಯದ ಜೀವನಕ್ಕೆ ಬೇಕಾದ ತಂತ್ರಗಳನ್ನು ಕಲಿಯಲು ಸಾಧ್ಯ, ಅಡುಗೆ ಮಾಡುವುದನ್ನು ಕಲಿಯುವುದರಿಂದ ಬೆಂಕಿ ಎಂದರೆ ಏನು, ಬೆಂಕಿಯ ಉಪಯೋಗಗಳು, ಬೆಂಕಿಯನ್ನು ಬಳಸುವಾಗ ವಹಿಸಬೇಕಾದ ಎಚ್ಚರಿಕಾ ಕ್ರಮಗಳು ಏನು , ಬೆಂಕಿಯಿಂದ ತೊಂದರೆಯಾದಾಗ ಮಾಡಬೇಕಾದ ಪ್ರಥಮ ಚಿಕಿತ್ಸಾ ವಿಧಾನ, ಅಡುಗೆ ಮಾಡಲು ಬೇಕಾದ ವಸ್ತುಗಳು ಏನೇನು ಎಂಬುವುದು ಅರಿಯುವಂತಾಗಬೇಕೆಂದರು.
ಯಾರು ಯಾರು ಯಾವ ಕೆಲಸ ಮಾಡಬೇಕು ಎನ್ನುವ ಕಾರ್ಯಯೋಜನೆ, ಸಹಕಾರ, ಪರಸ್ವರ ಕಾರ್ಯಹಂಚಿಕೆ, ಅಡುಗೆ ಮಾಡುವ ಕ್ರಮ, ನಂತರ ಉಳಿದ ಪಧಾರ್ಥಗಳನ್ನು ಸಂಗ್ರಹಿಸು ವಿಧಾನ, ಅತಿಥಿಗಳಿಗೆ ಬಡಿಸುವ ವಿಧಾನ ಹಾಗೂ ನಮ್ಮ ಸ್ಥಳವನ್ನು ಸ್ವಚ್ಛ ಮಾಡುವ ಕ್ರಮ ಮುಂತಾದ ಕ್ರಮಗಳನ್ನು ತಮಗೆ ಅರಿವಿಲ್ಲದೇ ಮಾಡುತ್ತಾ ನಿಮ್ಮಲ್ಲಿ ಒಗ್ಗಟ್ಟು ಮತ್ತು ಸಹಕಾರ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಶಿಬಿರದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಸರೋಜಮ್ಮ, ಗೈಡ್ಸ್ ಶಿಕ್ಷಕಿ ಸುಮಿತ್ರಮ್ಮ, ರಾಜಲಕ್ಷಮ್ಮ, ಭಾರ್ಗವಿ, ಗಾಯಿತ್ರಿ, ಪೋಷಕರಾದ ಪ್ರೇಮ ಮುಂತಾದವರು ಉಪಸ್ಥಿತರಿದ್ದರು.