ಗ್ರೀನ್ ವಾರಿಯರ್ಸ್‌ಯಿಂದ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನಾಚರಣೆ
ಕೋಲಾರ,ಜು,೬- ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನಾಚರಣೆ ಕೇವಲ ಆಚರಣೆಗಷ್ಟೆ ಸೀಮಿತಗೊಳಿಸದೆ ನಿತ್ಯದ ಬದುಕಾಗಿಸಿಕೊಳ್ಳುವ ಜತೆಗೆ ದಿನಬಳಕೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಪ್ರಜ್ಞಾಪೂರ್ವಕವಾಗಿ ದೂರವಾಗಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ವಿಜಯನಗರ ಜಿಲ್ಲೆ ಗ್ರೀನ್ ವಾರಿಯಸ್ ಮುಖ್ಯಸ್ಥೆ ರೋಹಿನಿ ಅಭಿಪ್ರಾಯಪಟ್ಟರು.
ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ, ಗ್ರಾಮವಿಕಾಸ, ರೆಸ್ಟ್ ಲೆಸ್ ಮತ್ತು ಗ್ರೀನ್ ವಾರಿಯರ್ಸ್ ಸಹಯೋಗದಲ್ಲಿ ನಗರದ ರವಿ ಕಾಲೇಜಿನಲ್ಲಿ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಚಿತ್ರಕಲೆ ಸ್ಫರ್ಧೆ ಮತ್ತು ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಸಿ ಬೆಳೆಸಿ ಪ್ಲಾಸ್ಟಿಕ್ ನಿಲ್ಲಿಸಿ ನಮ್ಮ ಭೂಮಿಯ ಉಳಿಸುವ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಸಾಮೂಹಿಕ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುವ ಉದ್ದೇಶದಿಂದ ಮತ್ತು ಕೋಲಾರ ಜಿಲ್ಲೆ ಪ್ಲಾಸ್ಟಿಕ್ ಮುಕ್ತ ಜಿಲ್ಲೆ ಮಾಡಲು ಗ್ರೀನ್ ವಾರಿಯರ್ಸ್ ಕೆಲಸ ಮಾಡುತ್ತಿದೆ ಎಂದು ಆನಂದ್ ಮಹಾರಾಜ್ ತಿಳಿಸಿದರು.
ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನವು ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧದ ಹೋರಾಟದಲ್ಲಿ ವ್ಯಕ್ತಿಗಳು, ವ್ಯವಹಾರಗಳು ಮತ್ತು ಸರ್ಕಾರಗಳನ್ನು ಒಂದುಗೂಡಿಸುವ ಜಾಗತಿಕ ಕರೆಯಾಗಿ ಕಾರ್ಯನಿರ್ವಹಿಸುತ್ತದೆ. ಪ್ಲಾಸ್ಟಿಕ್ ಚೀಲಗಳ ಮೇಲಿನ ನಮ್ಮ ಅವಲಂಭನೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ಸಮರ್ಥನೀಯ ಪರ್ಯಾಯಗಳನ್ನು ಅಳವಡಿಸಿಕೊಳ್ಳುವ ಮೂಲಕ, ಭವಿಷ್ಯದ ಪೀಳಿಗೆಗೆ ನಾವು ನಮ್ಮ ಪರಿಸರವನ್ನು ರಕ್ಷಿಸಬಹುದು. ನಾವು ಈ ದಿನವನ್ನು ಆಚರಿಸುತ್ತಿರುವಾಗ, ನಮ್ಮ ಗ್ರಹವನ್ನು ಸಂರಕ್ಷಿಸುವ ಮತ್ತು ಸ್ವಚ್ಛವಾದ, ಆರೋಗ್ಯಕರ ಜಗತ್ತನ್ನು ಉತ್ತೇಜಿಸುವ ನೀತಿಗಳಿಗಾಗಿ ಪ್ರತಿಪಾದಿಸುವ ನಮ್ಮ ಬದ್ಧತೆಯನ್ನು ನವೀಕರಿಸೋಣ. ಒಟ್ಟಾಗಿ, ನಾವು ಗಮನಾರ್ಹ ಪರಿಣಾಮವನ್ನು ಬೀರಬಹುದು ಮತ್ತು ಪ್ಲಾಸ್ಟಿಕ್ ಚೀಲ-ಮುಕ್ತ ಭವಿಷ್ಯದ ಕಡೆಗೆ ದಾರಿ ಮಾಡಿಕೊಡಬಹುದೆಂದು ಯಂಗ್ ಇಂಡಿಯಾ ಹೂಹಳ್ಳಿ ನಾಗರಾಜ್ ತಿಳಿಸಿದರು.
ಜಿಲ್ಲೆಯಲ್ಲಿ ಪ್ಲಾಸ್ಟಿಕ್ ವಿರುದ್ಧ ಯುದ್ದ ಶುರು ಮಾಡಿ ಪ್ರತಿವಾರ ಭಾನುವಾರದಂದು ಕೋಲಾರ ನಗರದಲ್ಲಿ ಪ್ಲಾಸ್ಟಿಕ್ ಮುಕ್ತ ಮಾಡಲು ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಯಂಗ್ ಇಂಡಿಯಾ ಆಡಳಿತ ಆಧಿಕಾರಿ ಶಾಮಲ ಯುವಜನರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಸಲೀಮ್, ಗುಲ್ಬರ್ಗ ರಾಜು ಇದ್ದರು.