ನೇಮಕಾತಿ ನಿಯಮ ಮಾರ್ಪಡಿಸಲು ಒತ್ತಾಯ
ಸಂಜೆವಾಣಿ ನ್ಯೂಸ್
ಮೈಸೂರು: ಜು.06:- ರಾಜ್ಯ ಸರ್ಕಾರ ಹೊರಗುತ್ತಿಗೆ ನೇಮಕಾತಿಗಳಲ್ಲಿ ಮೀಸಲಾತಿ ಅಳವಡಿಸಿ ಹೊರಡಿಸಿರುವ ಸುತ್ತೋಲೆಯಲ್ಲಿ ನೇಮಕಾತಿಗೆ ಪಾಲಿಸಬೇಕಾದ ನಿಯಮಗಳನ್ನು ಮಾರ್ಪಡಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಹಲವು ವರ್ಷಗಳಿಂದ ಉದ್ಯೋಗ ನೇಮಕಾತಿ ಪ್ರಕ್ರಿಯೆ ನಡೆಯದೆ ಅಹಿಂದ ಸಮುದಾಯದ ಲಕ್ಷಾಂತರ ನಿರುದ್ಯೋಗಿ ಯುವ ಸಮೂಹ ಬೀದಿಗೆ ಬಿದ್ದಿತ್ತು. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸುತ್ತೋಲೆ ಹೊರಡಿಸಿದೆ. ಆದರೆ, ಸುತ್ತೋಲೆಯ 1 ಮತ್ತು 6ನೇ ಷರತ್ತುಗಳು ಆದೇಶದ ಸದುದ್ದೇಶಕ್ಕೆ ವಿರುದ್ಧವಾಗಿವೆ. 1ನೇ ಷರತ್ತಿನಲ್ಲಿ ಹೊರಗುತ್ತಿಗೆ ಮೀಸಲಾತಿ ನೀತಿ 45 ದಿನಗಳಿಗಿಂತ ಕಡಿಮೆ ಅವಧಿಯ ನೇಮಕಾತಿಗೆ ಅನ್ವಯಿಸುವುದಿಲ್ಲ. ಇದು ಮೀಸಲಾತಿ ವಿರೋಧಿಗಳಿಗೆ ಅನುಕೂಲವಾಗಿದ್ದು, ಕೂಡಲೇ ಅದನ್ನು ರದ್ದುಪಡಿಸಿ ಆದೇಶ ನೀಡಬೇಕೆಂದು ಆಗ್ರಹಿಸಿದರು.
6ನೇ ಷರತ್ತಿನಲ್ಲಿ ಯಾವುದೇ ಇಲಾಖೆಯಲ್ಲಿ ಕನಿಷ್ಠ 20 ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಸಂದರ್ಭದಲ್ಲಿ ಮಾತ್ರ ಮೀಸಲಾತಿ ನೀತಿ ಜಾರಿಗೊಳಿಸುವುದು ಅವೈಜ್ಞಾನಿಕ ಹಾಗೂ ದುರುದ್ದೇಶಪೂರಕ. ಮೀಸಲಾತಿಯನ್ನು ವಂಚಿಸಲು ಸದಾ ಸಿದ್ಧರಿರುವವರಿಗೆ ಈ ನಿಂಬಂಧನೆಗಳು ಸಹಕಾರಿಯಾಗಲಿವೆ. 20ಕ್ಕೂ ಹೆಚ್ಚು ನೇಮಕಾತಿಗಳಿದ್ದಾಗ ಮಾತ್ರ ಮೀಸಲಾತಿ ನೀತಿ ಅನ್ವಯಿಸುತ್ತದೆ ಎಂದು ಸರ್ಕಾರವೇ ನಿರ್ಬಂಧವಿಧಿಸಿದರೆ ಎಲ್ಲಾ ನೇಮಕಾತಿ ಉದ್ಯೋಗಗಳನ್ನು 20ರ ಒಳಗೇ ನಿಗದಿ ಮಾಡುತ್ತ ಹೋಗುವ ಮೀಸಲಾತಿ ವಂಚಕರ ಚಾಳಿಗೆ ರತ್ನಗಂಬಳಿ ಹಾಕಿ ರಹದಾರಿ ಕಲ್ಪಿಸಿಕೊಟ್ಟಂತಾಗುತ್ತದೆ. ಹೀಗಾಗಿ 1 ಮತ್ತು 6ನೇ ಷರತ್ತನ್ನು ರದ್ದುಗೊಳಿಸಬೇಕು. ಈಗಾಗಲೇ ಜಾರಿಯಲ್ಲಿರುವ ರೋಸ್ಟರ್ ನಿಯಮಗಳ ಅನುಸಾರವಾಗಿ ನೇಮಕಾತಿ ಪ್ರಕ್ರಿಯೆ ಕಡ್ಡಾಯವಾಗಿರಬೇಕು ಎಂದು ಆದೇಶ ಮಾರ್ಪಾಡು ಮಾಡಿ ಮರು ಸುತ್ತೋಲೆ ಹೊರಡಿಸಬೇಕು. ಈ ಕುರಿತು ಯಾವುದೇ ಕ್ರಮ ಕೈಗೊಳ್ಳದಿದ್ದರೆ ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕರಾದ ಆಲಗೂಡು ಶಿವಕುಮಾರ್, ಬೆಟ್ಟಯ್ಯಕೋಟೆ, ಆರ್.ಸೋಮಣ್ಣ ಕುಪ್ಪೇಗಾಲ, ದಾಸಯ್ಯ, ರಜನಿ ಶಿವಶಂಕರ್, ತಿಮ್ಮೇಗೌಡ, ಶಿವು, ಶಿವಸ್ವಾಮಿ, ಕೃಷ್ಣಕುಮಾರ್, ದಿಲೀಪ್, ಶ್ರೀನಿವಾಸ್, ಪ್ರಕಾಶ್, ಚಂದನ್ ಸೇರಿದಂತೆ ಹಲವರು ಭಾಗವಹಿಸಿದ್ದರು.