ಶಿಡ್ಲಘಟ್ಟದಲ್ಲಿ ಜನತಾ ದರ್ಶನ: 61 ಅರ್ಜಿಗಳ ಸ್ವೀಕಾರ
ಚಿಕ್ಕಬಳ್ಳಾಪುರ, ಜು.೬: ಶಿಡ್ಲಘಟ್ಟ ತಾಲ್ಲೂಕು ಕೇಂದ್ರಕ್ಕೆ ಜಿಲ್ಲಾಡಳಿತದ ಅಧಿಕಾರಿಗಳು ತೆರಳಿ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಅಧಿಕಾರಿಗಳ ಸಮ್ಮುಖದಲ್ಲಿ ತಾಲ್ಲೂಕು ವ್ಯಾಪ್ತಿಯ ಸಾರ್ವಜನಿಕರ ಅಹವಾಲು, ದೂರುಗಳನ್ನು ಆಲಿಸಿ ಅವರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರೋಪಾಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶುಕ್ರವಾರ ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜನತಾ ದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ಸಾರ್ವಜನಿಕರು ಅಹವಾಲು ಅರ್ಜಿಗಳನ್ನು ಅಧಿಕಾರಿಗಳಿಗೆ ನೀಡಿ ಪರಿಹಾರಕ್ಕಾಗಿ ಮನವಿ ಸಲ್ಲಿಸಿದರು. ಕಂದಾಯ ಇಲಾಖೆಯಡಿ ೪೦ ಅರ್ಜಿಗಳು, ಶಿಡ್ಲಘಟ್ಟ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ೦೭ ಅರ್ಜಿಗಳು ಹಾಗೂ ಇಂಧನ ಇಲಾಖೆಯ ೦೨ ಅರ್ಜಿ, ಸಮಾಜ ಕಲ್ಯಾಣ ಇಲಾಖೆಯ ೦೩ ಅರ್ಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ೦೨ ಅರ್ಜಿ, ಮತ್ತು ಅಂಗವಿಕಲರ ಕಲ್ಯಾಣ ಇಲಾಖೆಯ ೦೨ ಅರ್ಜಿ ಸಣ್ಣ ನೀರಾವರಿ ಇಲಾಖೆ ೦೨ ಅರ್ಜಿ, ಅರಣ್ಯ ಇಲಾಖೆಯ ೦೧ ಅರ್ಜಿ, ನೋದಣಿ ಮತ್ತು ಮುದ್ರಾಂಕ ಇಲಾಖೆಯ ೦೧ ಅರ್ಜಿ, ಒಳನಾಡು ಜಲಸಾರಿಗೆ ಇಲಾಖೆಗೆ ಸಂಬಂಧಿಸಿದ ೧ ಅರ್ಜಿಯನ್ನು ಜನತಾ ದರ್ಶನದಲ್ಲಿ ಸ್ವೀಕರಿಸಿ ವಿಲೇವಾರಿಗೆ ಸೂಕ್ತ ಕ್ರಮವಹಿಸಲಾಯಿತು. ಒಟ್ಟಾರೆ ಜನತಾ ದರ್ಶನದಲ್ಲಿ ೬೧ ಅರ್ಜಿಗಳ ಇತ್ಯರ್ಥಕ್ಕೆ ಸಂಬಂಧ ಪಟ್ಟ ಇಲಾಖೆಗಳಿಗೆ ವರ್ಗಾಯಿಸಿ ಅಗತ್ಯ ಕ್ರಮವಹಿಸಲಾಯಿತು.
ಖುದ್ದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ ಅವರು ಜಂಟಿಯಾಗಿ ಅರ್ಜಿಗಳನ್ನು ಪರಿಶೀಲಿಸಿದರು. ೬೧ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ವರ್ಗಾಯಿಸಿ ಕಾಲ ಮಿತಿಯೊಳಗೆ ಇತ್ಯರ್ಥಪಡಿಸಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಈ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದ್ದು ರೈತರು ಭೂಮಿ ಸಿದ್ಧತೆ ಮಾಡಿಕೊಂಡಿದ್ದಾರೆ. ಸರ್ಕಾರವು ಕೂಡ ಬಿತ್ತನೆ ಬೀಜ,ರಸಗೊಬ್ಬರ ದಾಸ್ತಾನು ಮಾಡಿಕೊಂಡಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ. ಹಾಗೆಯೇ ಕಳೆದ ಬಾರಿ ಬೆಳೆ ನ?ವಾದ ರೈತರಿಗೆ ನೇರವಾಗಿ ಅವರ ಖಾತೆಗೆ ಹಣ ವರ್ಗಾವಣೆಯಾಗುತ್ತಿದೆ. ಸರ್ಕಾರಿ ಜಮೀನು ಭದ್ರತೆಗಾಗಿ ಪ್ರತ್ಯೇಕ ಆಯಪ್ ತಯಾರಿಸಿದ್ದು ಗಡಿಭಾಗ ಗುರುತಿಸಗುತ್ತಿದೆ. ರೈತರ ಖಾತೆಗಳಿಗೆ ಆಧಾರ್ ಲಿಂಕ್ ಮಾಡುತ್ತಿರುವುದು ಸಹ ಉತ್ತಮ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಜನತಾ ದರ್ಶನದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಜಿ.ಟಿ ನಿಟ್ಟಾಲಿ, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ತಹಶೀಲ್ದಾರ್ ಎಂ.ಎನ್. ಸ್ವಾಮಿ, ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.