ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲು ಆಗ್ರಹ
ಸಂಜೆವಾಣಿ ನ್ಯೂಸ್
ಮೈಸೂರು: ಜು.06:- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಸಾವಿರಾರು ಕೋಟಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಶುಕ್ರವಾರ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಮೈಸೂರಿನ ಬಡ ಜನರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ, ಅನಾನುಕೂಲಸ್ಥರಿಗೆ ಕೈಗೆಟುವ ದರದಲ್ಲಿ ನಿವೇಶನಗಳು ಸಿಗಲೆಂದು ನಾಲ್ವಡಿ ಕೃಷ್ಣರಾಜ ಒಡೆಯರು ಮುಡಾ ಸ್ಥಾಪಿಸಿದರು. ಆದರೆ ಈಗ ಮುಡಾ ರಿಯಲ್ ಎಸ್ಟೇಟ್ ಮಾಫಿಯಾಗಳ ಹಿಡಿತದಲ್ಲಿದೆ. 90 ಭಾಗದ ಮುಡಾ ನಿವೇಶನಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳೇ ಕಬಳಿಸಿದ್ದಾರೆ. ಸಾರ್ವಜನಿಕರು ಹಲವಾರು ವರ್ಷಗಳಿಂದ ನಿವೇಶನಕ್ಕೆ ಅರ್ಜಿ ಸಲ್ಲಿಸಿದರೂ ನಿವೇಶನ ಸಿಕ್ಕಿಲ್ಲ. ಬದಲಿಗೆ ನಿವೇಶನಗಳು ಬಲಾಢ್ಯರ ಪಾಲಾಗುತ್ತಿವೆ ಎಂದು ಕಿಡಿ ಕಾರಿದರು.
ಈ ಹಿಂದೆ ಆಯುಕ್ತರಾಗಿದ್ದ ದಿನೇಶ್‍ಕುಮಾರ್ ಅವರನ್ನು 2-3 ಬಾರಿ ವರ್ಗಾವಣೆ ಮಾಡಿದರೂ ನಗರಾಭಿವೃದ್ಧಿ ಸಚಿವರಿಗೆ ಹಣ ನೀಡಿ ಮುಡಾ ಲೂಟಿ ಮಾಡಲು ಇಲ್ಲಿಯೇ ಉಳಿದಿದ್ದರು. ಜತೆಗೆ ಮೈಸೂರು ಜಿಲ್ಲಾಧಿಕಾರಿ 10-15 ಬಾರಿ ಹಗರಣದ ಕುರಿತು ಸರ್ಕಾರಕ್ಕೆ ಪತ್ರ ಬರೆದರೂ ಸರಿಯಾಗಿ ಸ್ಪಂದಿಸಲಿಲ್ಲ. ಇದರ ಪರಿಣಾಮ ರಾಜ್ಯದ ಇತಿಹಾಸದಲ್ಲೇ ಬಹುದೊಡ್ಡ ಹಗರಣ ನಡೆದಿದೆ. ಸಿಎಂ ಆಪ್ತ ಬೈರತಿ ಸುರೇಶ್ ಎಲ್ಲಾ ತಿಳಿದಿದ್ದರೂ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಇದರ ಹಿಂದೆ ಸಿಎಂ, ನಗರಾಭಿವೃದ್ಧಿ ಸಚಿವ ಬೈರವಿ ಸುರೇಶ್ ಕೈವಾಡವಿದೆ ಎಂದು ದೂರಿದರು.
ಸಾವಿರಾರು ಕೋಟಿ ಹಗರಣ ನಡೆದಿದ್ದರೂ ಆಯುಕ್ತ ದಿನೇಶ್ ಮೇಲೆ ಕ್ರಮ ಕೈಗೊಳ್ಳದೆ, ಬಂಧಿಸಿ ವಿಚಾರಣೆಗೊಳಪಡಿಸದೆ, ಏನೂ ಆಗಿಲ್ಲವೆಂಬಂತೆ ಸುಲಭವಾಗಿ ಬೇರೆಡೆಗೆ ವರ್ಗಾವಣೆ ಮಾಡಿರುವುದು ಅಕ್ಷಮ್ಯ ಅಪರಾಧ.
ಇದು ಸರ್ಕಾರದ ವೈಫÀಲ್ಯ ಹಾಗೂ ಸರ್ಕಾರವೇ ನೇರವಾಗಿ ಭಾಗಿಯಾಗಿರುವುದನ್ನು ಎತ್ತಿ ತೋರಿಸುತ್ತದೆ. ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರವೇ ಯತ್ನಿಸುತ್ತಿದೆ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ತೀವ್ರವಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಪ್ರಭುಶಂಕರ್, ಕೃಷ್ಣಪ್ಪ, ಸುರೇಶ್ ಗೋಲ್ಡ್, ಪ್ರಜೀಶ್.ಪಿ, ಶಿವಲಿಂಗಯ್ಯ, ಶಾಂತರಾಜೇ ಅರಸ್, ನೇಹ, ಮಂಜುಳಾ, ವರಕೂಡು ಕೃಷ್ಣೇಗೌಡ, ಸಿಂಧುವಳ್ಳಿ ಶಿವಕುಮಾರ್, ನಾಗಣ್ಣ, ಕುಮಾರ್ ಗೌಡ, ಭಾಗ್ಯಮ್ಮ, ನಾರಾಯಣಗೌಡ, ಅನಿಲ್, ಹರೀಶ್, ರಾಮಕೃಷ್ಣೇಗೌಡ, ಗಿರೀಶ್, ಸೋಮಶೇಖರ್, ಪರಿಸರ ಚಂದ್ರು, ರಾಧಾಕೃಷ್ಣ, ಮಹದೇವಸ್ವಾಮಿ ನಂದಕುಮಾರ್, ಗೀತಗೌಡ, ಅಕ್ಬರ್, ರಾಮ ನಾಯಕ, ಪ್ರದೀಪ್, ಸ್ವಾಮಿ ಗೌಡ, ರವಿ, ದರ್ಶನ್ ಗೌಡ, ದಿನೇಶ್, ರಘು ಅರಸ್, ಗಣೇಶ್, ಕುಮಾರ್, ಸ್ವಾಮಿ ಗೌಡ, ಶಂಕರ್ ಗುರು, ಶಿವನಾಯಕ್ ಮತ್ತು ವಿಷ್ಣು ಸೇರಿದಂತೆ ಹಲವರು ಭಾಗವಹಿಸಿದ್ದರು.