20 ಗುತ್ತಿಗೆದಾರರು ಕಪ್ಪುಪಟ್ಟಿಗೆ: ಭೋಸರಾಜು
ಸಂಜೆವಾಣಿ ನ್ಯೂಸ್
ಮೈಸೂರು: ಜು.06:- ಎಸ್‍ಇಪಿ ಹಾಗೂ ಟಿಎಸ್‍ಪಿ ಯೋಜನೆ ಅಡಿಯಲ್ಲಿ ಕೊರೆಸಲಾದ ಕೊಳವೆ ಬಾವಿಗಳ ವಿದ್ಯುದೀಕರಣ ಪೂರ್ಣಗೊಳಿಸದೇ ಇರುವಂತಹ 20 ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಸೂಚನೆ ನೀಡಿದರು.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಶುಕ್ರವಾರ ನಡೆದ ಸಣ್ಣ ನೀರಾವರಿ ಇಲಾಖೆ ಮೈಸೂರು ವೃತ್ತದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಬಾರ್ಡ್, ಎಸ್‍ಡಿಆರ್‍ಎಫ್ ಮತ್ತು ಆಯವ್ಯಯದಲ್ಲಿ ಘೋಷಣೆಯಾದ ಯೋಜನೆಗಳ ಅನುಷ್ಠಾನ ಹಾಗೂ ಅವುಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ವಿಶೇಷ ಘಟಕ ಯೋಜನೆಯಲ್ಲಿ ಹಲವು ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಆದರೆ, ಹಲವು ಕಡೆಗಳಲ್ಲಿನ ಬೋರ್‍ವೆಲ್‍ಗಳನ್ನು ಕೊರೆಸಿರುವ ಗುತ್ತಿಗೆದಾರರು ವಿದ್ಯುದೀಕರಣ ಮಾಡುವ ಕಾರ್ಯ ಪೂರ್ಣಗೊಳಿಸಿಲ್ಲ. ಕೆಲವು ಪ್ರಕರಣಗಳಲ್ಲಿ ಮೂರು ವರ್ಷಗಳಿಂದ ಈ ಕಾರ್ಯ ಬಾಕಿ ಉಳಿಸಿಕೊಳ್ಳಲಾಗಿದೆ. ಆದ್ದರಿಂದ ವಿದ್ಯುತೀಕರಣ ಕಾರ್ಯ ಬಾಕಿ ಉಳಿಸಿಕೊಂಡಿರುವ ಗುತ್ತಿಗೆದಾರರ ಮೇಲೆ ಶಿಸ್ತು ಕ್ರಮಕೈಗೊಂಡು ಹಾಗೂ ಅವರನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಸೂಚನೆ ನೀಡಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ 7 ಕೆರೆ ತುಂಬಿಸುವ ಯೋಜನೆಗೆ 2022ರ ಮಾರ್ಚ್‍ನಲ್ಲಿ ಟೆಂಡರ್ ಪ್ರಕ್ರಿಯೆ ಪೂರೈಸಿ ಕರಾರು ಪತ್ರ ಮಾಡಿಕೊಡಲಾಗಿತ್ತು. ಆದರೆ ಇಲ್ಲಿಯವರೆಗೂ ಕಾಮಗಾರಿಯನ್ನು ಪ್ರಾರಂಭಿಸಲ್ಲ. ಕಾಮಗಾರಿ ಪ್ರಾರಂಭಿಸುವಂತೆ ಹಲವಾರು ಬಾರಿ ಗುತ್ತಿಗೆದಾರರಿಗೆ ನೋಟೀಸ್ ನೀಡಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಹೈದರಬಾದ್‍ನ ಅಯ್ಯಪ್ಪ ಕನ್ನಷ್ಟ್ರಕ್ಷನ್ ಅವರಿಗೆ ನೀಡಿದ್ದ ಗುತ್ತಿಗೆಯನ್ನು ರದ್ದುಗೊಳಿಸಿ ಶಿಸ್ತು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಭೂ ಸ್ವಾಧೀನ ಮುಗಿಸಿ: ಯಾವುದೇ ಕಾಮಗಾರಿಗಳನ್ನು ಪ್ರಾರಂಭಿಸುವ ಮುನ್ನ ಭೂ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕು. ಇದನ್ನು ಪೂರ್ಣಗೊಳಿಸದೇ ಬೇರೆ ಪ್ರಕ್ರಿಯೆ ಪ್ರಾರಂಭಿಸಿದರೆ ಬಹಳಷ್ಟು ತೊಂದರೆಗಳೂ ಎದುರಾಗುತ್ತವೆ. ಈ ಹಿನ್ನಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಆದ್ಯತೆ ನೀಡಬೇಕು. ಅಲ್ಲದೇ ಕೆರೆಗಳನ್ನು ಸುಸ್ಥಿತಿಯಲ್ಲಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಗಮನವಹಿಸಿ, ಮಳೆ ನೀರು ಹೆಚ್ಚಾಗಿ ಸಂಗ್ರಹವಾಗುವಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ ಅವರು, ಸದ್ಯಕ್ಕೆ ಪೂರ್ಣಗೊಂಡಿರುವ ಕಾಮಗಾರಿಗಳ ವರದಿಯನ್ನು ಸಕಾಲಕ್ಕೆ ಸಲ್ಲಿಸಬೇಕು. ಕಾಮಗಾರಿಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೆಲಸಗಳನ್ನ ಚುರುಕುಗೊಳಿಸಿ ಎಂದು ಸೂಚಿಸಿದರು.
ಗ್ಯಾರಂಟಿಯಿಂದ ಅಭಿವೃದ್ಧಿ ನಿಂತಿಲ್ಲ:
ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ದಿ ಕುಂಠಿತವಾಗಿಲ್ಲ, ಸಣ್ಣ ನೀರಾವರಿ ಇಲಾಖೆಗೆ ಅಗತ್ಯವಿರುವ ಅನುದಾನ ಲಭ್ಯವಾಗುತ್ತಿದೆ ಎಂದು ಸಚಿವ ಎನ್.ಎಸ್.ಭೋಸರಾಜು ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಬಹಳಷ್ಟು ಜನರ ಜೀವನ ಅಭಿವೃದ್ದಿಗೆಯಾಗಿದೆ. ದೇಶದಲ್ಲೇ ಪ್ರಪ್ರಥಮ ಬಾರಿಗೆ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಸಮರ್ಪಕವಾಗಿ ಅನುಷ್ಠಾನಗೊಳಿಸಿದ ರಾಜ್ಯ ನಮ್ಮದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಸರ್ಕಾರ ಅಭಿವೃದ್ದಿ ಪಥದಲ್ಲಿ ಸಾಗಿದೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ದಿ ಕಾರ್ಯಗಳಲ್ಲಿ ಕುಂಠಿತವಾಗಿದೆ, ಅನುದಾನ ದೊರೆಯುತ್ತಿಲ್ಲ ಎನ್ನುವ ಬಿಜೆಪಿ ಮುಖಂಡರುಗಳ ಆರೋಪದಲ್ಲಿ ಹುರುಳಿಲ್ಲ. ಚುನಾವಣೆಯ ಹಿನ್ನೆಲೆಯಲ್ಲಿ ಸರ್ಕಾರದ ಈ ಕಾರ್ಯಕ್ರಮಗಳು ಹೆಚ್ಚಾಗಿ ಪ್ರಚಾರವಾಗಿಲ್ಲ. ಆದರೆ ಎಲ್ಲಾ ಇಲಾಖೆಗಳಿಗೂ ಅಗತ್ಯ ಅನುದಾನ ದೊರೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ದಕ್ಷಿಣ ವಲಯದ ಮುಖ್ಯ ಇಂಜಿನಿಯರ್ ರಾಘವನ್, ಅಧೀಕ್ಷಕ ವಿನಾಯಕ್ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.