ಬಿಜೆಪಿ ಸಹ ಪ್ರಭಾರಿಯಾಗಿ ಸಂಸದ ಸುಧಾಕರ್ ನೇಮಕ
ಚಿಕ್ಕಬಳ್ಳಾಪುರ.ಜು.೬- ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಡಾ. ಕೆ. ಸುಧಾಕರ್ ಅವರನ್ನು ಭಾರತೀಯ ಜನತಾ ಪಕ್ಷ ಕರ್ನಾಟಕ ರಾಜ್ಯ ಸಹ ಪ್ರಭಾರಿ ಆಗಿ ನೇಮಕ ಮಾಡಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜಗತ್ಪ್ರಕಾಶ್ ನಡ್ದ ಆದೇಶ ಹೊರಡಿಸಿದ್ದಾರೆ.
ಅಂತೆಯೇ ರಾಜ್ಯದ ಪ್ರಭಾರಿಯಾಗಿ ರಾಧಾ ಮೋಹನ್ ದಾಸ್ ಅಗರ್ವಾಲ್ ರವರನ್ನು ನೇಮಕ ಮಾಡಿರುತ್ತಾರೆ.
ಲೋಕಸಭಾ ಸದಸ್ಯ ಡಾ. ಕೆ. ಸುಧಾಕರ್ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಜಾತ್ಯಾತೀತ ಜನತಾದಳ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದು ಚಿಕ್ಕಬಳ್ಳಾಪುರ ತಾಲೂಕಿನಿಂದ ಸ್ಪರ್ಧಿಸಿದ ವ್ಯಕ್ತಿಯೊಬ್ಬರು ಪ್ರಪ್ರಥಮ ಬಾರಿಗೆ ಲೋಕಸಭೆ ಪ್ರವೇಶಿಸಿದ ದಾಖಲೆ ನಿರ್ಮಿಸಿದರು.
೧೯೫೨ ರಿಂದ ೨೦೧೯ ವರೆಗೆ ನಡೆದ ಚುನಾವಣೆಗಳಲ್ಲಿ ಚಿಕ್ಕಬಳ್ಳಾಪುರ ತಾಲೂಕಿನಿಂದ ಯಾವೊಬ್ಬ ರಾಜಕಾರಣಿಯೂ ಸಹ ಲೋಕಸಭೆ ಪ್ರವೇಶಿಸಿರಲಿಲ್ಲ ಹಾಗಾಗಿ ಇವರ ಲೋಕಸಭೆ ಪ್ರವೇಶ ತಾಲ್ಲೂಕು ರಾಜಕಾರಣದಲ್ಲಿ ಹೆಚ್ಚಿನ ಮಟ್ಟಿಗೆ ಸದ್ದು ಮಾಡಿತ್ತು.
ಲೋಕಸಭಾ ಸದಸ್ಯ ಡಾಕ್ಟರ್ ಕೆ ಸುಧಾಕರ್ ಅವರ ರಾಜ್ಯದ ಸಹ ಪ್ರಭಾರಿ ನೇಮಕಕ್ಕೆ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಕೆ. ವಿ. ನಾಗರಾಜ್ ಕೆ. ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಭಾರತೀಯ ಜನತಾ ಪಕ್ಷ ಜಿಲ್ಲಾ ಮುಖಂಡ ಕೆ. ವಿ. ನವೀನ್ ಕಿರಣ್ ಜಾತ್ಯಾತೀತ ಜನತಾದಳ ಜಿಲ್ಲಾ ಘಟಕದ ಅಧ್ಯಕ್ಷ ಮುಕ್ತ ಮುನಿಯಪ್ಪ ಒಳಗೊಂಡಂತೆ ಅನೇಕ ಗಣ್ಯರುಗಳು ತಮ್ಮ ಅಭಿನಂದನೆಯನ್ನು ವ್ಯಕ್ತಪಡಿಸಿರುತ್ತಾರೆ.