ತ್ಯಾಜ್ಯ ನೀರಿನಿಂದ ಕೆರೆಕಟ್ಟೆಗಳು ಕಲುಷಿತ: ಕ್ರಮಕ್ಕೆ ಒತ್ತಾಯ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.06: ತಾಲೂಕಿನ ಬೂಕನಕೆರೆ ಹೋಬಳಿಯ ಬಣ್ಣೇನಹಳ್ಳಿ ಬಳಿ ನಿರ್ಮಾಣಗೊಂಡಿರುವ ಫೇವರಿಚ್ ಮೆಗಾ ಫುಡ್ ಪಾರ್ಕ್ ವ್ಯಾಪ್ತಿಯ ಆಹಾರ ತಯಾರಿಕಾ ಘಟಕಗಳು ತಮ್ಮ ತ್ಯಾಜ್ಯ ನೀರನ್ನು ಸಂಸ್ಕರಿಸದೆ ಸಮೀಪದ ಕೆರೆ ? ಕಟ್ಟೆಗಳಿಗೆ ಹರಿಸುತ್ತಿರುವುದರಿಂದ ಕೆರೆ ?ಕಟ್ಟೆಗಳು ತಮ್ಮ ಮೂಲಸ್ವರೂಪವನ್ನು ಕಳೆದುಕೊಂಡು ಕಲುಷಿತ ನೀರಿನಿಂದ ಕೂಡಿದ ತ್ಯಾಜ್ಯದ ಗುಂಡಿಗಳಾಗಿ ಪರಿವರ್ತನೆಗೊಂಡಿವೆ. ಕೆರೆಯ ನೀರು ಕಲುಷಿತಗೊಂಡಿರುವುದುರಿಂದ ಫುಡ್ ಪಾರ್ಕ್ ವ್ಯಾಪ್ತಿಯ ಐಚನಹಳ್ಳಿ. ಬಣ್ಣೇನಹಳ್ಳಿ. ತಗಡೂರು, ವೆಂಕಟರಾಜಪುರ, ಅಶೋಕನಗರ, ಚೀಕನಹಳ್ಳಿ ಮುಂತಾದ ಗ್ರಾಮಗಳ ಜನ ಗಂಭೀರ ಅಪಾಯಕ್ಕೆ ಸಿಲುಕ್ಕಿದ್ದಾರೆ.
ತಾಲೂಕಿನ ಬಣ್ಣೇನಹಳ್ಳಿ ಬಳಿ 2014 ರಲ್ಲಿ ಸ್ಥಾಪನೆಯಾದ ಫೇವರಿಚ್ ಮೆಗಾ ಫುಡ್ ಪಾರ್ಕ್ ನ್ನು ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದ್ದರು. ಫುಡ್ ಪಾರ್ಕ್ ಆರಂಭಗೊಂಡರೆ ಈ ಬಾಗದ ಸಾವಿರಾರು ಯುವಕರಿಗೆ ಉದ್ಯೋಗ ದೊರಕುತ್ತದೆಂದು ಭಾವಿಸಲಾಗಿತ್ತು. ಇಸ್ರೇಲ್, ಜಪಾನ್, ಡೆನ್ಮಾರ್ಕ್, ಆಸ್ಟ್ರೇಲಿಯಾ, ನೆದರ್ಲ್ಯಾಂಡ್ ಸೇರಿದಂತೆ ಹಲವು ರಾಷ್ಟ್ರಗಳ ಅತ್ಯಾಧುನಿಕ ಆಹಾರ ತಂತ್ರಜ್ಞಾನದ ಘಟಕಗಳು ಆರಮಂವಾಗಲಿವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಮನ್‍ಮುಲ್ ಜೊತೆ ಒಪ್ಪಂದ ಮಾಡಿಕೊಂಡಿರುವ ಪಶು ಆಹಾರ ಉತ್ಪನ್ನ ಘಟಕ, ತಂಪು ಪಾನೀಯ ಉತ್ಪಾದನಾ ಘಟಕಗಳಂತಹ ಕೆಲವು ದೇಶೀಯ ಘಟಕಗಳು ಇಲ್ಲಿ ಆರಂಭವಾಗಿವೆ. ಇಲ್ಲಿನ ಆಹಾರ ಉತ್ಪಾದನಾ ಘಟಕಗಳು ಹೊರ ರಾಜ್ಯದ ಯುವಕರಿಗೆ ಮಣೆ ಹಾಕಿ ಸ್ಥಳೀಯ ಯುವಕರಿಗೆ ಉದ್ಯೋಗ ನೀಡದೆ ವಂಚಿಸಿವೆಯಲ್ಲದೆ ಸರ್ಕಾರಿ ನಿಯಮಗಳನ್ನು ಪಾಲಿಸದೆ ತ್ಯಾಜ್ಯ ನೀರನ್ನು ಸಂಸ್ಕರಿಸದೆ ಸಮೀಪದ ಕೆರೆ ಕಟ್ಟೆಗಳಿಗೆ ಬಿಟ್ಟು ರೈತರ ಪಾಲಿಗೆ ಮರಣ ಮೃದಂಗ ಭಾರಿಸುತ್ತಿವೆ ಎಂದು ರಾಜ್ಯ ಜಿಲ್ಲಾ ರೈತಸಂಘ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಆರೋಪಿಸಿದ್ದಾರೆ.
ತಾಲೂಕಿನ ಕಟ್ಟಹಳ್ಳಿ ಬಳಿಯಿಂದ ಹೇಮಾವತಿ ನದಿ ನೀರನ್ನು ಏತ ನೀರಾವರಿಯ ಮೂಲಕ ಮೇಲೆತ್ತಿ ಬೂಕನಕೆರೆ ಹೋಬಳಿಯ 46 ಕೆರೆ ಕಟ್ಟೆಗಳನ್ನು ಹೇಮೆಯ ನೀರಿನಿಂದ ತುಂಬಿಸುವ ಐಚನಹಳ್ಳಿ ಏತ ನೀರಾವರಿ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಚಾಲನೆ ನೀಡಿದ್ದಾರೆ. ಈ ಯೋಜನೆಯ ಮೂಲಕ ಐಚನಹಳ್ಳಿ ಹಾಗೂ ಸುತ್ತಮುತ್ತಲ ಕೆರೆಗಳು ಮುಂದಿನ ದಿನಗಳಲ್ಲಿ ಹೇಮೆಯ ನೀರಿನಿಂದ ತುಂಬಿ ತುಳುಕಲಿವೆ. ಹೇಮೆಯ ನೀರಿನಿಂದ ತುಂಬಿ ತುಳುಕಬೇಕಾಗಿದ್ದ ಕೆರೆ ಕಟ್ಟೆಗಳು ಈಗ ಫುಡ್ ಪಾರ್ಕ್ ತ್ಯಾಜ್ಯ ನೀರಿನಿಂದ ತುಂಬಿದ್ದು ನೀರಾವರಿಗೆ ನಿರುಪಯುಕ್ತಗೊಂಡಿದೆ.
ಫುಡ್ ಪಾರ್ಕ್ ಪಕ್ಕದ ಹನಾರ್ ಕಟ್ಟೆಯ ನೀರನ್ನು ರೈತರು ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿದ್ದರಲ್ಲದೆ ದನಕರುಗಳಿಗೆ ಕುಡಿಯಲು ಬಳಕೆ ಮಾಡುತ್ತಿದ್ದರು. ಇದೀಗ ಹನಾರ್ ಕಟ್ಟೆ ಸಂಪೂರ್ಣ ಕಲುಷಿತಗೊಂಡಿದೆ. ಸ್ಥಳೀಯ ರೈತರ ಹೋರಾಟದ ಫಲವಾಗಿ ಕೇಂದ್ರೀಯ ಪರಿಸರ ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತೀಚೆಗೆ ಫುಡ್ ಪಾರ್ಕ್ ಆವರಣಕ್ಕೆ ಭೇಟಿ ನೀಡಿ ಪರಿವೀಕ್ಷಣೆ ಮಾಡಿದ್ದಾರೆ. ಪರಿವೀಕ್ಷಣೆಯ ಸಮಯದಲ್ಲಿ ರೈತರ ಅಹವಾಲುಗಳನ್ನು ಆಲಿಸಿದ್ದು ಬಿಟ್ಟರೆ ಮತ್ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಜೂನ್ 26 ರಂದು ಬೂಕನಕೆರೆ ಗ್ರಾಮದಲ್ಲಿ ಜಿಲ್ಲಾಡಳಿತ ನಡೆಸಿದ ಜನಸ್ಪಂದನಾ ಸಭೆಯಲ್ಲಿಯೂ ರೈತ ಮುಖಂಡ ಎಂ.ವಿ.ರಾಜೇಗೌಡ ನೇತೃತ್ವದಲ್ಲಿ ಫುಡ್ ಪಾರ್ಕ್ ವ್ಯಾಪ್ತಿಯ ರೈತರು ಜಿಲ್ಲಾಧಿಕಾರಿಗಳಿಗೆ ಖುದ್ದು ದೂರು ನೀಡಿ ಕಲುಷಿತ ನೀರಿನಿಂದ ರೈತರ ಕೆರೆಯನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ಕೂಡ ಫುಡ್ ಪಾಕ್ರ್ಗೆ ಭೇಟಿ ನೀಡಿ ಸಮಸ್ಯೆಗಳನ್ನು ಕಣ್ಣಾರೆ ಅವಲೋಕಿಸಿದ್ದಾರೆ. ಆದರೆ ಫುಡ್ ಪಾಕ್ರ್ನ ಆಹಾರ ತಯಾರಿಕಾ ಘಟಕಗಳ ಅಧಿಕಾರಿಗಳು ಮಾತ್ರ ಡೋಂಟ್ ಕೇರ್ ನೀತಿ ಅನುಸರಿಸುತ್ತಿದ್ದು ರೈತರ ಬದುಕನ್ನು ಕಸಿದುಕೊಳ್ಳುತ್ತಿದ್ದಾರೆ.
ನಮ್ಮ ಸಂಸದರಾದ ಹೆಚ್.ಡಿ.ಕುಮಾರಸ್ವಾಮಿ ಕೆಂದ್ರ ಸರ್ಕಾರದ ಬೃಹತ್ ಕೈಗಾರಿಕೆಗಳ ಸಚಿವರಾಗಿದ್ದಾರೆ. ಜಿಲ್ಲೆಯ ಜನರ ಹಿತರಕ್ಷಣೆ ಮಾಡಬೇಕಾದ ಜವಾಬ್ದಾರಿ ಕೇಂದ್ರ ಸಚಿವರ ಮೇಲಿದೆ. ಮಾನ್ಯ ಕೇಂದ್ರ ಸಚಿವರು ಫುಡ್ ಪಾಕ್ರ್ಗೆ ಭೇಟಿ ನೀಡಿ ಇಲ್ಲಿನ ವ್ಯವಸ್ಥೆಯ ಪರಿಶೀಲನೆ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಪರಿಸರ ಇಲಾಖೆ ಮತ್ತು ಆರೋಗ್ಯ ಇಲಾಖೆ ತಕ್ಷಣವೇ ಕ್ರಮ ಜರುಗಿಸಿ ಕಲುಷಿತ ನೀರನ್ನು ಕೆರೆಗೆ ಬಿಡದಂತೆ ತಡೆಯಬೇಕಲ್ಲದೆ ಜನ-ಜಾನುವಾರುಗಳ ಆರೋಗ್ಯ ಕಾಪಾಡುವಂತೆ ಒತ್ತಾಯಿಸಿದ್ದಾರೆ.