ಜೀವನ ಶೈಲಿಯಲ್ಲಿನ ಬದಲಾವಣೆಯಿಂದ ಬೆನ್ನು ನೋವು ನಿವಾರಣೆ; ಡಾ‌ಜೆ ರಘುಕುಮಾರ್

ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೫: ಪ್ರತಿ ನಿತ್ಯ ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ ಬಳಕೆ ಮತ್ತು ಜೀವನ ಶೈಲಿಯಲ್ಲಿನ ಬದಲಾವಣೆಯಿಂದ ಬೆನ್ನು ನೋವು ಬರದಂತೆ ನೋಡಿಕೊಳ್ಳಬಹುದು ಎಂದು ಜೆಜೆಎಂ ವೈದ್ಯಕೀಯ ಮಹಾ ವಿದ್ಯಾಲಯದ ಕೀಲುಮೂಳೆ ವಿಭಾಗದ ಪ್ರಾಧ್ಯಾಪಕ ಡಾ. ಜೆ. ರಘುಕುಮಾರ್ ತಿಳಿಸಿದರು. ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ವಯಸ್ಕರನ್ನು ಕಾಡುವ ಬೆನ್ನುನೋವು- ಕಾರಣ-ಚಿಕಿತ್ಸೆ ಮತ್ತು ಪರಿಹಾರ ವಿಷಯ ಕುರಿತು ಮಾತನಾಡಿದ ಅವರು, ಬೆನ್ನುನೋವು ಒಂದು ಅತಿ ಸಾಮಾನ್ಯವಾದ ಆರೋಗ್ಯ ಸಮಸ್ಯೆ. ಯಾವುದೇ ಸಮಸ್ಯೆ ಬರದಂತೆ ನೋಡಿಕೊಳ್ಳುವುದು ಅತೀ ಮುಖ್ಯ. ಅದೇ ರೀತಿ ಬೆನ್ನು ನೋವು ಬರದಂತೆ ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ ಬಳಕೆ ಮತ್ತು ಜೀವನ ಶೈಲಿ ಬದಲಾವಣೆಗೆ ಹೆಚ್ಚಿನ ಗಮನ ನೀಡಬೇಕು ಎಂದರು.ಚಿಕ್ಕ ಮಕ್ಕಳಿಂದ ಹಿಡಿದು ಅಬಾಲವೃದ್ಧರಾದಿಯಾಗಿ ಎಲ್ಲರಲ್ಲೂ ಬೆನ್ನು ನೋವಿನ ಸಮಸ್ಯೆ ಕಂಡು ಬರುತ್ತದೆ. ಜೀವನದಲ್ಲಿ ಒಮ್ಮೆಯಾದರೂ ಬೆನ್ನು ನೋವಿನ ಸಮಸ್ಯೆ ಕಾಡುತ್ತದೆ. ಅನೇಕ ಕಾರಣಗಳಿಂದ ಬೆನ್ನುನೋವು ಅನುಭವಿಸಬೇಕಾಗುತ್ತದೆ. ಮುಂಜಾಗ್ರತೆಯೇ ಸೂಕ್ತ ಪರಿಹಾರ ಎಂದು ತಿಳಿಸಿದರು.ಬೆನ್ನಿನ ಸ್ತಂಬವು ಬೆನ್ನೆಲುಬು ಮತ್ತು ಮಾಂಸಖಂಡಗಳಿಂದ ರಚನೆಯಾಗಿದೆ. ಬೆನ್ನು ತಲೆಯ ಭಾರವನ್ನು ಹೊತ್ತುಹೊಟ್ಟೆಯ ತೂಕವನ್ನು ಕಾಲುಗಳಿಗೆ ರವಾನಿಸುತ್ತದೆ. ಬೆನ್ನು ನಮ್ಮೆಲ್ಲರ ಭಾವಭಂಗಿಯನ್ನು ಕಾಪಾಡಿ ಬಾಗಿಸು ವಿಕೆ ಯನ್ನು ಒದಗಿಸುತ್ತದೆ ಎಂದು ತಿಳಿಸಿದರು.ಬೆನ್ನುನೋವಿಗೆ ನೂರಾರು ಕಾರಣಗಳಿವೆ. ಮಾಂಸಖಂಡಗಳ ಮೇಲಿನ ಒತ್ತಡ ಅಥವಾ ಸೆಳೆತ ಸಾಮಾನ್ಯ ಕಾರಣ ಆಗಿದೆ. ಬೆನ್ನಿನ ರಚನಾತ್ಮಕ ಅಥವಾ ಜನ್ಮಜಾತ ತೊಂದರೆಗಳು, ಅನುಚಿತ ಭಂಗಿ, ಮೂಳೆ ಸವೆತ, ಸಂಧಿವಾತ, ಔದ್ಯೋಗಿಕ ಮತ್ತು ಸೋಂಕು ಬೆನ್ನುನೋವಿಗೆ ಕಾರಣವಾಗಬಹುದು. ಬೆನ್ನುನೋವಿಗೆ ಕೆಲವೊಂದು ಪೂರಕವಾದ ಕಾರಣಗಳೂ ಇವೆ. ಜಡ ಜೀವನಶೈಲಿ, ಮದ್ಯಪಾನ, ಧೂಮಪಾನ, ವಯೋಮಾನ, ಶಾರೀರಿಕ ಬೊಜ್ಜು ಮುಖ್ಯ ಕಾರಣಗಳು ಎಂದು ತಿಳಿಸಿದರು.ಬೆನ್ನುನೋವು ಕಾಣಿಸಿಕೊಂಡಲ್ಲಿ ರೋಗ ಲಕ್ಷಣದ ಇತಿಹಾಸ, ದೈಹಿಕ ಪರೀಕ್ಷೆ, ಕ್ಷ-ಕಿರಣ, ಎಂಆರ್‌ಐ ಇತರೆ ಪರೀಕ್ಷೆಗಳಿಂದ ದೃಢಪಡಿಸಿಕೊಳ್ಳಲಾಗುತ್ತದೆ. ಕಾರಣಗಳನ್ನು ಹುಡುಕಿ ಸೂಕ್ತ ಚಿಕಿತ್ಸೆ ಒದಗಿಸಬಹುದು. ಇಂದಿನ ಆಧುನಿಕ ವೈದ್ಯಕೀಯ ಯುಗದಲ್ಲಿ ಔಷಽ ಮತ್ತು ಶಸ್ತ್ರಚಿಕಿತ್ಸೆಯ ಮೂಲಕವೂ ಬೆನ್ನುನೋವನ್ನು ನಿವಾರಣೆ ಮಾಡಬಹುದು ಎಂದು ತಿಳಿಸಿದರು.ಯಾವುದೇ ವಯಸ್ಸಿನವರಾದದರೂ ಸರಿ ಬೆನ್ನುನೋವನ್ನ ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡಲೇಬಾರದು.ವೈದ್ಯರನ್ನ ಸಂಪರ್ಕಿಸಿ, ಸಲಹೆ, ಚಿಕಿತ್ಸೆ ಪಡೆಯುವುದು ಸೂಕ್ತ. ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯುವ ಮೂಲಕ ಬೆನ್ನುನೋವಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.ಕೇಂದ್ರದ ನಿರ್ದೇಶಕ ಡಾ.ಜಿ. ಗುರುಪ್ರಸಾದ್, ಡಾ. ಸುರೇಶ್‌ಬಾಬು, ಡಾ.ಕೌಜಲಗಿ, ಡಾ. ಎ.ಎಸ್. ಮೃತ್ಯುಂ ಜಯ, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಅಂಜಲಿ ಇತರರು ಇದ್ದರು.