ಆಷಾಢ ಅಮಾವಾಸ್ಯೆ: ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ
ಸಂಜೆವಾಣಿ ವಾರ್ತೆ
ಹನೂರು ಜು 6 :- ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಆಷಾಢ ಮಣ್ಣೇತ್ತಿನ ಅಮಾವಾಸ್ಯೆ ಪ್ರಯುಕ್ತ ಅಂಗವಾಗಿ ಸಹಸ್ರಾರು ಭಕ್ತಾದಿಗಳು ಆಗಮಿಸಿ ಮಲೆ ಮಾದಪ್ಪನ ದರ್ಶನ ಪಡೆದು ಹರಕೆ ಪೂಜಾ ಸೇವೆ ಪುನಸ್ಕಾರಗಳನ್ನು ಸಲ್ಲಿಸಿದರು.
ಶುಕ್ರವಾರ ಮಣ್ಣೇತ್ತಿನ ಅಮಾವಾಸ್ಯೆ ದಿನದ ಹಿನ್ನೆಲೆ ಮಲೆ ಮಾದಪ್ಪನ ಸನ್ನಿಧಿಗೆ ಹರಿದು ಬಂದ ಸಹಸ್ರಾರು ಭಕ್ತರು ಮಳೆಯ ನಡುವೆ ಭಕ್ತರು ಹರಕೆ ಪೂಜೆಗಳನ್ನು ಸಲ್ಲಿಸಿದ್ದಾರೆ. ಹರಕೆ ಹೊತ್ತ ಭಕ್ತಾದಿಗಳು ಹರಳೆಣ್ಣೆ ಬತ್ತಿಯನ್ನು ಹಚ್ಚಿಕೊಂಡು ದೇವಾಲಯದ ಸುತ್ತ ಪ್ರದಕ್ಷಣೆ ಹಾಕಿ ನಮಸ್ಕರಿಸುತ್ತಾ ಪಂಜಿನ ಸೇವೆ ಸಲ್ಲಿಸಿದ್ದಾರೆ.
ರುದ್ರಾಕ್ಷಿ ಮಂಟಪ, ಹುಲಿವಾಹನ, ಬಸವ ವಾಹನಕ್ಕೆ ಮಹದೇಶ್ವರ ಬೆಳ್ಳಿ ವಾಹನ. ಪೂಜೆ ಸಲ್ಲಿಸಿ ದೇವಾಲಯ ಸುತ್ತ ಎಳೆದು ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿದರು. ಧೂಪ ಕರ್ಪೂರ ದೀಪ ಹಚ್ಚಿ ಪೂಜೆ ಸಲ್ಲಿಸಿ ಭಕ್ತಿ ಪರಾಕಾಷ್ಠೆ ಮೆರೆದು ಮಲೆ ಮಾದಪ್ಪನ ಕೃಪೆಗೆ ಪಾತ್ರರಾದರು. ಸಂಜೆ ಚಿನ್ನದ ತೇರನ್ನು ಎಳೆದು ಪೂಜೆ ಸಲ್ಲಿಸಿದ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಸೇವೆಯನ್ನು ಸಲ್ಲಿಸಿದ್ದಾರೆ.
ಅಮಾವಾಸ್ಯೆ ಪೂಜೆ ಸಲ್ಲಿಸಲು ಕರ್ನಾಟಕ ಹಾಗೂ ತಮಿಳುನಾಡು ಹಾಗೂ ಜಿಲ್ಲೆಯ ನಾನಾ ಭಾಗಗಳಿಂದ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿ ಆಗಮಿಸಿದೆ. ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಇರುವುದರಿಂದ ಮಹಿಳೆಯರ ಸಂಖ್ಯೆ ಹೆಚ್ಚಾಗಿ ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಸೇವೆಯನ್ನು ಸಲ್ಲಿಸಿದ್ದಾರೆ.
ಪ್ರಾಧಿಕಾರದ ಕಾರ್ಯದರ್ಶಿ ರಘು ರವರು ಪ್ರಾಧಿಕಾರದ ವತಿಯಿಂದ ದಾಸೋಹ ಕುಡಿಯುವ ನೀರು ಭಕ್ತಾದಿಗಳಿಗೆ ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟರು ನಂತರ ದಾಸೋಹ ಭವನಕ್ಕೆ ಭೇಟಿ ನೀಡಿ ಭಕ್ತಾದಿಗಳ ಜೊತೆ ಪ್ರಸಾದ ಸ್ವೀಕರಿಸಿದರು. ಪ್ರಾಧಿಕಾರದ ಸಿಬ್ಬಂದಿಗಳು ಮಲೆ ಮಾದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳ ಜೊತೆ ಸೌಜನ್ಯದಿಂದ ವರ್ತಿಸಿ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸ ಬೇಕೆಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.