ತಾಳಿಕೋಟೆ: ಇಂದಿರಾ ಕ್ಯಾಂಟೀನ ಕಟ್ಟಡÀ ಕಾಮಗಾರಿ ಡಿಸಿಪರಿಶೀಲನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.6: ಪ್ರಗತಿಯಲ್ಲಿರುವ ಇಂದಿರಾ ಕ್ಯಾಂಟೀನ ಕಾಮಗಾರಿಗೆ ವೇಗ ನೀಡಿ ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ತಾಳಿಕೋಟೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಪಟ್ಟಣದ ಹುಣಸಗಿ ರಸ್ತೆಯಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ಕಟ್ಟಡದ ನಿರ್ಮಾಣ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. ಈ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಕಟ್ಟಡವು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಕ್ಯಾಂಟೀನ್ ಸುತ್ತ ಕಂಪೌಂಡ್ ನಿರ್ಮಿಸಿ, ಪ್ಲೋರಿಂಗ್ ಮಾಡಲು ತಾಳಿಕೋಟೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಹಳೆಯ ಪುರಸಭೆಯ ಆವರಣದಲ್ಲಿನ ಗ್ರಂಥಾಲಯ ಕಟ್ಟಡವನ್ನು ಪರಿಶೀಲನೆ ನಡೆಸಿದ ಅವರು, ಈಗಿರುವ ಗ್ರಂಥಾಲಯದ ಪಕ್ಕದಲ್ಲಿರುವ ಖಾಲಿ ಜಾಗೆಯಲ್ಲಿ ಆಧುನಿಕ ಸೌಲಭ್ಯಯುಳ್ಳ ಅತ್ಯುತ್ತಮ ಸ್ಮಾರ್ಟ್ ಗ್ರಂಥಾಲಯ ನಿರ್ಮಾಣಕ್ಕಾಗಿ ನೀಲ ನಕ್ಷೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪಂಚಾಯತಿು ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಿ.ಬಿ ಕುಂಬಾರ, ತಾಳಿಕೋಟೆ ತಹಶೀಲ್ದಾರ ಪ್ರೇಮಸಿಂಗ್ ಪವಾರ, ಮುಖ್ಯಾಧಿಕಾರಿ ಮೋಹನ ಜಾಧವ, ಆರೋಗ್ಯ ನಿರೀಕ್ಷಕ ಶಿವಾನಂದ ಜುಮನಾಳ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.