ಭಕ್ತಿ ಮಾರ್ಗದಿಂದ ಮಾನವ ಜನ್ಮ ಸಾರ್ಥಕ: ಕೇಂದ್ರ ಸಚಿವ ಶ್ರೀಪಾದ ನಾಯಕ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.6: ಭಕ್ತಿ ಮಾರ್ಗದಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಹಾಗಾಗಿ ಭಕ್ತಿ ಮಾರ್ಗದಲ್ಲಿ ನಡೆದು ತಾಯಿ ದುರ್ಗಾದೇವಿ ಅನುಗ್ರಹಕ್ಕೆ ಪಾತ್ರರಾಗುವ ಮೂಲಕ ಮಾನವ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು ಎಂದು ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ ಯಶೋ ನಾಯಕ ಹೇಳಿದರು.
ಜಿಲ್ಲೆಯ ತಿಕೋಟಾ ತಾಲೂಕಿನ ಸುಕ್ಷೇತ್ರ ಸೋಮದೇವರ ಹಟ್ಟಿಯಲ್ಲಿ ಹಮ್ಮಿಕೊಂಡ ಮಾತಾ ದುರ್ಗಾದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಲವಾರು ಜನ್ಮಗಳ ನಂತರ ಮಾನವ ಜನ್ಮ ದೊರಕಿದೆ. ಈ ಮಾನವ ಜನ್ಮ ಸಾರ್ಥಕವಾಗಿಸಿಕೊಳ್ಳುವುದು ಭಕ್ತಿ ಮಾರ್ಗದಿಂದ ಮಾತ್ರ ಸಾಧ್ಯ. ದೊಡ್ಡ ದೊಡ್ಡ ವಾಹನ ಖರೀದಿಸುವುದೇ ಸಾಧನೆಯಲ್ಲ, ಭಗವಂತ ಕರುಣಿಸಿದ ಈ ಜೀವನ ಸದುಪಯೋಗವಾಗಬೇಕು, ಭಕ್ತಿ ಮಾರ್ಗದಿಂದ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು.
ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯಕ ಮಾತನಾಡಿ, ಬಂಜಾರಾ ಸಮಾಜದ ಸರ್ವತೋಮುಖ ಪ್ರಗತಿ, ತಾಂಡಾ ಪ್ರಗತಿಗೆ ಸರ್ಕಾರ ತಾಂಡಾ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಅನುದಾನ ಒದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಬಂಜಾರಾ ಸಮಾಜ ಬೆವರು ಹರಿಸಿ ದುಡಿಯುವುದಕ್ಕೆ ಹÉಸರಾಗಿದೆ, ಈ ಸಮಾಜ ಇಡೀ ರಾಷ್ಟ್ರದ ಸ್ವತ್ತು. ಪ್ರತಿ ಅಭಿವೃದ್ಧಿ ಕಾರ್ಯದ ಹಿಂದೆ ಬಂಜಾರಾ ಸಮಾಜದ ಜನರ ಶ್ರಮ ಅಡಗಿದೆ ಎಂದರು.
40 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಬಂಜಾರಾ ಸಮಾಜಕ್ಕೆ ಜನಸಂಖ್ಯೆ ಆಧರಿಸಿ ಸಮಾಜಕ್ಕೆ ಸೌಲಭ್ಯಗಳು ದೊರಕಬೇಕಿದೆ ಎಂದೂ ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಗೆ ಬರಪೀಡಿತ ಎಂಬ ಹಣೆಪಟ್ಟಿ ಬ್ರಿಟಿಷ ಕಾಲದಿಂದಲೂ ಇದೆ. ರಾಜಸ್ತಾನದ ಜೈಸಲ್ಮೇರ್, ವಿಜಯಪುರದ ಶಾಶ್ವತ ಬರ ಪೀಡಿತ ಜಿಲ್ಲೆ ಎಂಬ ಹಣೆಪಟ್ಟಿ ಅಂಟಿಕೊಂಡಿತ್ತು, ಆದರೆ ತಾಯಿ ದುರ್ಗಾದೇವಿ ಆಶೀರ್ವಾದ ಬಲದಿಂದ ಡಾ. ಎಂ.ಬಿ. ಪಾಟೀಲ ಅವರು ನೀರಾವರಿ ಸಚಿವರಾದ ಫಲವಾಗಿ ಬರದ ಜಿಲ್ಲೆ ಹಣೆಪಟ್ಟಿ ಕಳಚುವ ಕೆಲಸ ಮಾಡಿದ್ದಾರೆ ಎಂದರು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿದರು.
ಸುಕ್ಷೇತ್ರ ಪೌರಾದೇವಿ ದೇವಾಲಯ ಶ್ರೀಗಳಾದ ಜೀತು ಮಹಾರಾಜರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಾತಾ ದುರ್ಗಾದೇವಿ ದೇವಾಲಯದ ಮಹಾರಾಜ ಜಗನು ಮಹಾರಾಜ ಸಾನ್ನಿಧ್ಯ ವಹಿಸಿದ್ದರು.
ಮುಂಬಯಿ ಸಂಸದ ಸಂಜಯ ಪಾಟೀಲ, ಐಎಎಸ್ ಅಧಿಕಾರಿ ಕಪಿಲ್ ಮೋಹನ್, ಗೋವಾ ರಾಜ್ಯದ ಮಾಜಿ ಸಚಿವ ದೀಪಕ ಪಾವಸ್ಕರ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಅರ್ಜುನ ರಾಠೋಡ, ಡಾ.ಕೆ.ಬಿ. ನಾಗೂರ, ಡಾ.ಬಾಬು ರಾಜೇಂದ್ರ ನಾಯಕ, ಹೈದರಾಬಾದ್ ಐಜಿ ನಾರಾಯಣ ನಾಯಕ, ಗೋವಾ ಕನ್ನಡಿಗರ ಪರ ಹೋರಾಟಗಾರ ಮೋಹನ ಶೆಟ್ಟಿ, ಡಿ.ಎಲ್. ಚವ್ಹಾಣ, ಸೋಮನಾಥ ಬಾಗಲಕೋಟ, ಮಹೇಂದ್ರ ನಾಯಕ, ಅನುಸೂಯಾ ಜಾಧವ ಉಪಸ್ಥಿತರಿದ್ದರು.