ಜು. ೮ ರಂದು ಪುರಿ ಶ್ರೀ ಜಗನ್ನಾಥ ರಥಯಾತ್ರೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೫: ದಾವಣಗೆರೆ ಮಹಾನಗರದಲ್ಲಿ ಮೂರನೇ ಬಾರಿಗೆ ಜು. ೮ ರಂದು ಪುರಿ ಶ್ರೀ ಜಗನ್ನಾಥ ರಥಯಾತ್ರೆ ನಡೆಯಲಿದೆ ಎಂದು ದಾವಣಗೆರೆ ಇಸ್ಕಾನ್ ಮುಖ್ಯಸ್ಥ ಅವಧೂತ ಚಂದ್ರ ದಾಸ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಳೆದ ಎರಡು ವರ್ಷದಿಂದ ಪುರಿಯ ಶ್ರೀ ಜಗನ್ನಾಥ ಸ್ವಾಮಿಯ ಆಶೀರ್ವಾದ ಸರ್ವರಿಗೂ ದೊರೆಯುವಂತಾಗಲಿ ಮತ್ತು ರಥೋತ್ಸವವನ್ನ ಇಲ್ಲಿಯೇ ನಡೆಸಲಿ  ಎಂಬ ಮಹದಾಶಯದೊಂದಿಗೆ ಇಸ್ಕಾನ್‌ನಿಂದ ಪುರಿ ಶ್ರೀ ಜಗನ್ನಾಥ ರಥಯಾತ್ರೆ ನಡೆಸಲಾಗುತ್ತಿದೆ ಎಂದರು.ಸೋಮವಾರ ಬೆಳಗ್ಗೆ ೭ಕ್ಕೆ ರಥಯಾತ್ರೆ ಅಂಗವಾಗಿ ಶ್ರೀ ನರಸಿಂಹ ಯಜ್ಞ ನೆರವೇರಲಿದೆ. ಮಧ್ಯಾಹ್ನ ೧.೩೦ಕ್ಕೆ ಮಂಡಿಪೇಟೆಯ ಶ್ರೀ ಕೋದಂಡರಾಮ ದೇವಸ್ಥಾನದಿಂದ ಪ್ರಾರಂಭವಾಗುವ ರಥಯಾತ್ರೆಗೆ ನೂತನ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡುವರು ಎಂದು ತಿಳಿಸಿದರು. ಮಂಡಿಪೇಟೆಯ ಶ್ರೀ ಕೋದಂಡರಾಮ ದೇವಸ್ಥಾನದಿಂದ ಪ್ರಾರಂಭವಾಗುವ ರಥಯಾತ್ರೆ ಚಾಮರಾಜಪೇಟೆ ವೃತ್ತ, ಹಾಸಭಾವಿ ವೃತ್ತ, ಚೌಕಿಪೇಟೆ, ಹೊಂಡದ ವೃತ್ತ, ಅರುಣ ಸರ್ಕಲ್, ಆರ್.ಎಚ್. ಛತ್ರ, ಜಯದೇವ ವೃತ್ತ, ಅಂಬೇಡ್ಕರ್ ವೃತ್ತ, ವಿದ್ಯಾರ್ಥಿ ಭವನ, ಜಿಲ್ಲಾ ಆಸ್ಪತ್ರೆ ರಸ್ತೆ ಮೂಲಕ ಸಾಗಲಿದೆ. ರಥಯಾತ್ರೆ ಒಟ್ಟು ಐದು ಕಿಲೋ ಮೀಟರ್ ಸಾಗಿ ವೇದಿಕೆ ಕಾರ್ಯಕ್ರಮ ನಡೆಯುವ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪ ತಲುಪಲಿದೆ ಎಂದು ತಿಳಿಸಿದರು.ಸಂಜೆ ೫.೩೦ಕ್ಕೆ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮವನ್ನ ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸುವರು. ಶ್ರೀ ಜಗನ್ನಾಥ ಮಹಾಮಂಗಳಾರತಿ, ನೃತ್ಯ, ನಾಟಕ, ಗುರುಗಳಿಂದ ಆಶೀರ್ವಚನ ಇತರೆ ಕಾರ್ಯಕ್ರಮ ನಡೆಯಲಿವೆ. ನಂತರ ಪ್ರಸಾದ ವಿನಿಯೋಗ ಇದೆ ಎಂದು ತಿಳಿಸಿದರು.ಈವರೆಗೆ ಬೆಳಗಾವಿಯಿಂದ ರಥವನ್ನ ತರಿಸಲಾಗುತ್ತಿತ್ತು. ಈ ವರ್ಷ ನೂತನ ರಥದಲ್ಲಿ ಶ್ರೀ ಜಗನ್ನಾಥ ಸ್ವಾಮಿಯ ಮೆರವಣಿಗೆ ನಡೆಯಲಿದೆ. ದಾವಣಗೆರೆಯ ಭಕ್ತರ ಸಹಾಯದಿಂದ ೧೧ ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ರಥ ನಿರ್ಮಾಣವಾಗಿದೆ. ಅಂತಿಮ ಸ್ಪರ್ಶದ ಕಾರ್ಯ ಪ್ರಗತಿಯಲ್ಲಿದೆ. ಜು. ೮ ರಂದು ಸರ್ವರೂ ನೂತನ ರಥವನ್ನ ಕಾಣಬಹುದು ಎಂದು ತಿಳಿಸಿದರು.ರಥಯಾತ್ರೆ ಸಾಗಿ ಬರುವಂತಹ ಮಾರ್ಗದಲ್ಲಿ ಚಾಮರಾಜಪೇಟೆ, ಹಾಸಭಾವಿ ವೃತ್ತ, ಹೊಂಡದ ವೃತ್ತ, ರೇಣುಕ ಮಂದಿರ, ಆರ್.ಎಚ್. ಛತ್ರ ಒಳಗೊಂಡಂತೆ ಆಯ್ದ ಕಡೆಯಲ್ಲಿ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಗು ವುದು. ೨೫ ರಿಂದ ೩೦ ಸಾವಿರ ಜನರಿಗೆ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ದಾನಿಗಳು ಅಕ್ಕಿ, ಬೇಳೆ, ಎಣ್ಣೆ.. ಹೀಗೆ ಆಹಾರ ಪದಾರ್ಥಗಳನ್ನ ಕಾಣಿಕೆಯಾಗಿ ಸಲ್ಲಿಸಬಹುದು ಎಂದು ತಿಳಿಸಿದರು.ದಾವಣಗೆರೆಯಲ್ಲಿ ಇಸ್ಕಾನ್ ದೇವಸ್ಥಾನಕ್ಕೆ ಸೂಕ್ತ ಜಾಗ ಪರಿಶೀಲನೆ ನಡೆಸಲಾಗುತ್ತಿದೆ. ನಗರಾಭಿವೃದ್ಧಿ ಪ್ರಾಽಕಾರ ದಿಂದ ಸಿಎ ನಿವೇಶನ ಇಲ್ಲವೇ ಯಾರಾದರೂ ಭಕ್ತಾದಿಗಳು ಜಾಗ ನೀಡಿದಲ್ಲಿ ಇಸ್ಕಾನ್ ದೇವಸ್ಥಾನ ನಿರ್ಮಾಣ ಮಾಡಲಾಗುವುದು. ಆಸಕ್ತ ದಾನಿಗಳು ಜಾಗ ನೀಡಬೇಕು ಎಂದು ಮನವಿ ಮಾಡಿದರು.ಮಾಜಿ ಮೇಯರ್ ಎಸ್.ಟಿ. ವೀರೇಶ್, ನಗರಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್, ಕೆ.ಬಿ. ಶಂಕರ ನಾರಾಯಣ, ಸತ್ಯನಾರಾಯಣಮೂರ್ತಿ, ನಲ್ಲೂರು ರಾಜಕುಮಾರ್ ಇತರರು ಇದ್ದರು.