ತುಂಗಾ ಡ್ಯಾಂನಿಂದ ಹೊಸಪೇಟೆ ಟಿಬಿ ಡ್ಯಾಂಗೆ 41 ಸಾವಿರ ಕ್ಯೂಸೆಕ್ ಹೊರಹರಿವು!
ಶಿವಮೊಗ್ಗ, ಜು. 5: ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಭಾರೀ ವರ್ಷಧಾರೆಯಾಗುತ್ತಿದೆ. ಈ ನಡುವೆ ತುಂಗಾ ಜಲಾಶಯದ ಒಳಹರಿವಿನಲ್ಲಿ ನಿರಂತರವಾಗಿ ಏರಿಕೆ ಕಂಡುಬರಲಾರಂಭಿಸಿದೆ. ಇದರಿಂದ ಡ್ಯಾಂನಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣದಲ್ಲಿಯೂ ಏರಿಕೆಯಾಗಿದೆ.ಜುಲೈ 4 ರ ಗುರುವಾರ ಮಧ್ಯಾಹ್ನದ ಮಾಹಿತಿಯಂತೆ, ಡ್ಯಾಂಗೆ 41 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ ಅಷ್ಟೇ ಪ್ರಮಾಣದ ನೀರನ್ನು ಡ್ಯಾಂನ 21 ಕ್ರಸ್ಟ್ ಗೇಟ್ ಗಳನ್ನು ತೆರೆದು ಹೊರ ಬಿಡಲಾಗುತ್ತಿದೆ.ಇದರಿಂದ ಶಿವಮೊಗ್ಗ ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿಯು ಮೈದುಂಬಿ ಹರಿಯಲಾರಂಭಿಸಿದೆ. ಕೋರ್ಪಳಯ್ಯನ ಛತ್ರದ ಬಳಿಯಿರುವ ಅಪಾಯದ ಮಟ್ಟ ಸೂಚಿಸುವ ಮಂಟಪ ಮುಳುಗಲು ಸುಮಾರು ಒಂದು ಅಡಿಯಷ್ಟು ನೀರು ನೀರು ಬೇಕಾಗಿದೆ.ಏರಿಕೆ: ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂ ಒಳಹರಿವಿನಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಜು. 4 ರ ಬೆಳಿಗ್ಗೆಯ ಮಾಹಿತಿಯಂತೆ, 60,238 ಕ್ಯೂಸೆಕ್ ಒಳಹರಿವಿದೆ. 586 ಕ್ಯೂಸೆಕ್ ಹೊರಹರಿವಿದೆ. ಡ್ಯಾಂನ ನೀರಿನ ಮಟ್ಟ 1760 (ಗರಿಷ್ಠ ಮಟ್ಟ : 1819) ಅಡಿಯಿದೆ.ಉಳಿದಂತೆ ಭದ್ರಾ ಡ್ಯಾಂನ ಒಳಹರಿವು 4908 ಅಡಿಯಿದೆ. 348 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಸ್ತುತ ಡ್ಯಾಂ ನೀರಿನ ಮಟ್ಟ 127 (ಗರಿಷ್ಠ ಮಟ್ಟ : 186) ಅಡಿಯಿದೆ.