ವೈಚಾರಿಕತೆಯೇ ಮೌಢ್ಯ ನಿವಾರಣೆಗೆ ಮಾರ್ಗ
ಸಂಜೆವಾಣಿ ವಾರ್ತೆ
ಶಿವಮೊಗ್ಗ.ಜು.೭ :- ನಮ್ಮ ವಿದ್ಯಾವಂತರಲ್ಲಿ ಮೌಢ್ಯ ಜಾಸ್ತಿಯಾಗಿದೆ. ನಾವು ಆರೋಗ್ಯವಾಗಿದ್ದರೆ ದೇಶವೂ ಆರೋಗ್ಯ ವಾಗಿರುತ್ತದೆ. ಅಂತಹ ಆರೋಗ್ಯಕ್ಕೆ ಕುವೆಂಪು ಹೇಳಿದ ನಿತ್ಯವೂ ಅವತರಿಪ ಸತ್ಯಾವತಾರವನ್ನು ಕಾಣಬೇಕು. ನಾವು ಮೌಢ್ಯದ ಅದೀನದಲ್ಲಿದ್ದೇವೆ. ಸತ್ಯವನ್ನು ನಮಗೆ ಯಾರೂ ಹೇಳುತ್ತಿಲ್ಲ. ವೈಚಾರಿಕತೆ ಮೌಢ್ಯದ ನಿವಾರಣೆಗೆ ರೂಢಿಸಿಕೊಳ್ಳುವ ಅಗತ್ಯವನ್ನು ಸಾಹಿತಿಗಳು, ವಿಶ್ರಾಂತ ಪ್ರಿನ್ಸಿಪಾಲರಾದ ಡಾ. ಎಚ್. ಟಿ. ಕೃಷ್ಣಮೂರ್ತಿ ವಿವರಿಸಿದರು.ಅವರು ಜುಲೈ 3 ರಂದು  ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹೊಳೆಹೊನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್. ಎಸ್.ಎಸ್. ವಾರ್ಷಿಕ ಶಿಬಿರವು ಅಗಸನಹಳ್ಳಿಯಲ್ಲಿ ನಡೆಯುತ್ತಿದೆ. ಈ ಶಿಬಿರದಲ್ಲಿ ಏರ್ಪಡಿಸಿದ್ದ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಕುವೆಂಪು ಸಾಹಿತ್ಯದಲ್ಲಿನ ವೈಚಾರಿಕ ಪ್ರಜ್ಞೆ ವಿಚಾರವಾಗಿ ಮಾತನಾಡಿದರು. ನಿಜವಾದ ಕಲಿಕೆ ಎಂದರೆ ತಪ್ಪಾಗಿದ್ದನ್ನು ಸರಿಪಡಿಸಿ ಕೊಳ್ಳುವುದು. ಅದು ಕಲಿಕೆಯ ಕ್ರಮ. ಅದನ್ನೇ ಕುವೆಂಪು ಅವರು ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು. ಬನ್ನಿರೈ ಮನುಜ ಮತಕೆ ಎಂದು ಹೇಳಿದ್ದನ್ನು ವಿವರಿಸಿದರು. ಐವತ್ತು ವರ್ಷಗಳ ಹಿಂದೆ  ಕುವೆಂಪು ಅವರು ಹೇಳಿದ ನಿಮ್ಮ ಕನಸುಗಳನ್ನು ನನಸು ಮಾಡಲು ನಮ್ಮ ವ್ಯವಸ್ಥೆ ಪ್ರಯತ್ನ ಮಾಡುತ್ತಿಲ್ಲ ಎನ್ನುವ ಮಾತು ಇವತ್ತು ಪ್ರಸ್ತುತವಾಗಿದೆ.  ನಮ್ಮಲ್ಲಿರುವ ಸಂಪತ್ತನ್ನು ರಾಜಕೀಯದವರು ಮಾತ್ರ ದೋಚುತ್ತಿಲ್ಲ. ಗುಡಿ, ಗೋಪುರ, ಮಸೀದಿ, ಚರ್ಚು ಇಡೀ ಜಗತ್ತನ್ನು ದೋಚುತ್ತಿವೆ ಎಂದು ವಿವರಿಸಿ ಮನುಜಮತ, ವಿಶ್ವಪಥ ಕುರಿತು ವಿವರಿಸಿದರು.ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಮಾತನಾಡಿ ದತ್ತಿ ದಾನಿಗಳಾದ ಉದ್ಯಮಿ ಡಿ. ಆರ್. ಅಮರೇಂದ್ರ ಕಿರೀಟಿ ಅವರು ತಮ್ಮ ತಂದೆ ದೇವಂಗಿ ಡಿ. ಆರ್. ರತ್ನಾಕರ ಅವರ ಸ್ಮರಣೆಗಾಗಿ ದತ್ತಿ ಸ್ಥಾಪಿಸಿದ್ದಾರೆ. ಅವರ ಆಶಯದಂತೆ ಈ ಉಪನ್ಯಾಸ ನಡೆಯುತ್ತಿದೆ. ವಿದ್ಯಾರ್ಥಿಗಳು ಆತ್ಮ ವಿಶ್ವಾಸದಿಂದ ಬದುಕನ್ನು ನಿರ್ವಹಿಸುವುದು ಕಲಿಯಬೇಕು. ಈ ಶಿಬಿರದ ಸದುಪಯೋಗ ವಾಗಲಿ ಎಂದು ಹಾರೈಸಿದರು.ಹೊಳೆಹೊನ್ನೂರು ಕಸಾಪ ಹೋಬಳಿ ಅಧ್ಯಕ್ಷರಾದ ಹ. ಬ. ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಗಾಂಜಾ, ಡ್ರಗ್ಸ್, ನಶೆಗೆ ಮಾರುಹೋಗದೆ ಉತ್ತಮ ವಿಚಾರ, ಜೀವನ ಪದ್ದತಿ ಅಳವಡಿಸಿಕೊಳ್ಳಲು ಕುವೆಂಪು ಅವರ ಸಾಹಿತ್ಯ ಓದಿ ಎಂದರು.ತಾಲ್ಲೂಕು ಕಸಾಪ ಅಧ್ಯಕ್ಷರಾದ ಕೋಡ್ಲು ಯಜ್ಞಯ್ಯ, ರೈತ ಮುಖಂಡರಾದ ಕೃಷ್ಣಮೂರ್ತಿ, ಕಸಾಪ ಉಪಾಧ್ಯಕ್ಷರಾದ ಶ್ರೀನಿವಾಸ್, ಕಾಲೇಜು ಉಪನ್ಯಾಸಕರಾದ ಚಂದ್ರಪ್ಪ, ಸುರೇಶ್, ಸೌಮ್ಯ, ಗಾಯತ್ರಿ, ಅಂಬಿಕಾ, ತಾ. ಕಾರ್ಯದರ್ಶಿ ಎಚ್. ತಿಮ್ಮಪ್ಪ, ಹೋಬಳಿ ಕಾರ್ಯದರ್ಶಿ ಚಂದ್ರಪ್ಪ ಉಪಸ್ಥಿತರಿದ್ದರು. ಕು. ಚಂದನ ಮತ್ತು ಸಂಗಡಿಗರು ಪ್ರಾರ್ಥನೆ ಹಾಡಿದರು. ಕು. ಮಾನಸ ಸ್ವಾಗತಿಸಿದರು, ಕು. ಚಂದನ ನಿರೂಪಿಸಿದರು. ಪ್ರಿಯಾ ವಂದಿಸಿದರು. ರಾ. ಸೇ. ಯೋ. ಕಾರ್ಯಕ್ರಮಾಧಿಕಾರಿಗಳಾದ ಎಚ್. ರುದ್ರಮುನಿ, ಡಾ. ರಾಜುನಾಯ್ಕ ಎಸ್. ನಿರ್ವಹಿಸಿದರು.