ಅಮಾವಾಸ್ಯೆಯಂದು ಮೂರುಜೋಡಿ  ದಂಪತಿ ವಿವಾಹ
ಸಂಜೆವಾಣಿ ವಾರ್ತೆ
ಚಿತ್ರದುರ್ಗ, ಜು. 5 – ಸಾಮೂಹಿಕ ಇಲ್ಲವೇ ಯಾವುದೋ ಒಂದು ದೇವಸ್ಥಾನ ಇತರೆಡೆ ಮದುವೆಯಾಗುವವರು ಬಡವರು ಎಂದು ಅಪಹಾಸ್ಯ ಮಾಡುತ್ತಿದ್ದ ಕಾಲದಲ್ಲಿ ಇದನ್ನು ತೊಡೆದು ಹಾಕುವ ಬಡವ, ಬಲ್ಲಿದ ಎನ್ನುವ ಅಸಮಾನತೆ ತೊಲಗಿಸಿ ಸರ್ವರೂ ಒಂದು ವೇದಿಕೆಯಲ್ಲಿ ಭಾಗಿಯಾಗಿ ಸತಿಪತಿಗಳಾಗುವ ಅವಕಾಶವನ್ನು ಚಿತ್ರದುರ್ಗ ಶ್ರೀಮುರುಘಾಮಠ ಕಲ್ಪಿಸಿದೆ ಎಂದು ಶಿವಶರಣ ಮಾದಾರಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು ಅಭಿಪ್ರಾಯಪಟ್ಟರು.ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಜರುಗಿದ ಮೂವತ್ನಾಲ್ಕನೇ ವರ್ಷದ 7ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಕೇವಲ ಲಿಂಗಾಯತ ಜಾತಿಗೆ ಸೀಮಿತವಾಗದೆ ಶೋಷಿತ, ಅಲಕ್ಷಿತ ಸಮಾಜಗಳ ಕಲ್ಯಾಣಕ್ಕೆ ಈ ಸಾಮೂಹಿಕ ವಿವಾಹ ಕಾರ್ಯಕ್ರಮ ವರದಾನವಾಗಿದೆ ಎಂದರೆ ತಪ್ಪಾಗಲಾರದು. ಹೆಚ್ಚಾಗಿ ಈ ಸಮಾಜಗಳಿಗೆ ಹೆಚ್ಚು ಪ್ರಯೋಜನವಾಗಿದೆ ಎಂದರು.ಈ ಹಿಂದೆ ಆರ್ಥಿಕ ಸ್ಥಿತಿಗತಿ ಅಷ್ಟೊಂದು ಸಬಲರಾಗಿರದೇ ಇರುವವರು ದೂರದ ಧರ್ಮಸ್ಥಳ ಇನ್ನಿತರೆ ಕ್ಷೇತ್ರಗಳಿಗೆ ಹೋಗಬೇಕಿತ್ತು. ಆ ಸಮಸ್ಯೆ ಇಲ್ಲವಾಗಿಸಿ ಬಡವರಿಗೆ ಒಂದು ಪ್ರೇರಣಾದಾಯಕ ಸಾಮಾಜಿಕ ಕಾರ್ಯ ಮಾಡುತ್ತಿದೆ. ಹಾಗೆಯೇ ಇಲ್ಲಿ ಯಾವುದೇ ಮುಹೂರ್ತ ಶುಭಗಳಿಗೆಗೆ ಮಹತ್ವ ನೀಡದೆ 5ನೇ ತಾರೀಕು ಅದು ಯಾವುದೇ ದಿನ ಇರಲಿ ಸಾಮೂಹಿಕ ನಡೆದಿದೆ. ಅದಕ್ಕೆ ಸಾಕ್ಷಿ ಎಂದರೆ ಇಂದಿನ ಅಮಾವಾಸ್ಯೆ ದಿನ ಹಸೆಮಣೆ ಏರಿದ ದಂಪತಿಗಳೇ ಸಾಕ್ಷಿ. ಇಂತಹ ಸಾಮಾಜಿಕ ಪರಿವರ್ತನೆ ಕಾರ್ಯಗಳು ಶ್ರೀಮಠದಲ್ಲಿ ನಿರಂತರವಾಗಿ ನಡೆಯುತ್ತಿವೆ ಎಂದು ಹೇಳಿದರು.ನೇತೃತ್ವ ವಹಿಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಮಾತನಾಡಿ, ಕರ್ನಾಟಕದ ಇತಿಹಾಸದಲ್ಲಿ ಚಿತ್ರದುರ್ಗ ಬೃಹನ್ಮಠಕ್ಕೆ ತನ್ನದೇ ಆದ ಉಜ್ವಲ ಇತಿಹಾಸವಿದೆ. ಶ್ರೀಮಠ ಹಿಂದಿನಿAದ ಇಂದಿನವರೆಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳನ್ನು ಮಾಡುತ್ತ ಈಗ ಅದು ಬಹು ವಿಸ್ತಾರಗೊಂಡಿದೆ. ಸಾರ್ವಜನಿಕರು ಈ ಸತ್ಕಾರ್ಯಗಳಿಗೆ ಸಹಕಾರ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಶ್ರೀಮಠವು ಮಾಡುವ ಕಾರ್ಯ ಯೋಜನೆಗಳಿಗೆ ಹೇಗೆ ಸ್ಪಂದನೆ ನೀಡುತ್ತಿದ್ದಾರೆ ಎಂದರೆ ಈಗ ನಡೆದಿರುವ ಕಲ್ಯಾಣ ಮಹೋತ್ಸವವೇ ಸಾಕ್ಷಿ. ಕಾರಣ ಇಂದು ಅಮಾವಾಸ್ಯೆ ಆದರೂ ಲೆಕ್ಕಿಸದೇ ಜನ ಶ್ರೀಮಠ ಮಾಡುತ್ತಿರುವ ಕೆಲಸಕ್ಕೆ ಕೈಜೋಡಿಸಿರುವುದು ಪರಿವರ್ತನೆಯ ಸಂಕೇತ ಎಂದು ನುಡಿದರು.ನಾವು ಬದುಕಿನಲ್ಲಿ ಅಂಧಶ್ರದ್ಧೆ, ಆಲಸ್ಯ ತೊಡೆದು ಸರಳತೆ, ಸದುವಿನಯ ರೂಢಿಸಿಕೊಳ್ಳುವ ಮೂಲಕ ಜೀವನದಲ್ಲಿ ಶಿಸ್ತು, ಸನ್ನಡತೆ, ಸ್ವಚ್ಚತೆಯೂ ಅಗತ್ಯ. ನಮ್ಮ ಜೀವನ ಇನ್ನೊಬ್ಬರಿಗೆ ಮಾದರಿಯಾಗಿರಬೇಕು. ಆ ರೀತಿಯ ಮಾರ್ಗದರ್ಶಿ ಪಥದಲ್ಲಿ ಸಾಗಬೇಕು. ಇದ್ದಾಗ ಸತ್ಕಾರ್ಯ ಮಾಡುವ ಹೊಣೆಗಾರಿಕೆ ಹೊಂದಬೇಕು. ಕಾಯಕದಿಂದ ಬಂದುದ್ದರಲ್ಲಿ ದಾಸೋಹ ಮಾಡಬೇಕು. ನಾವು ಸತ್ತಾಗ ಏನೂ ತೆಗೆದುಕೊಂಡು ಹೋಗುವುದಿಲ್ಲ ಎಂಬ ಅರಿವಿನೊಂದಿಗೆ ಪರೋಪಕಾರ ಜೀವನ ಸಾಗಿಸುತ್ತ ನಡೆಯಬೇಕೆಂದರು.