ಕಾರ್ಮಿಕ ಮಂಡಳಿ ಪುನರ್ ರಚನೆಗೆ ಕಟ್ಟಿಸಂಗಾವಿ ಒತ್ತಾಯ
ಕಲಬುರಗಿ:ಜು.5:ಕಾರ್ಮಿಕ ಮಂಡಳಿಯನ್ನು ಪುನರ್ ರಚಿಸಿ ಕಲ್ಯಾಣ ಕರ್ನಾಟಕದ ಓರ್ವ ಸದಸ್ಯರನ್ನು ಪರಿಗಣಿಸಬೇಕು ಎಂದು ಹಿರಿಯ ಕಾರ್ಮಿಕ ಮುಖಂಡ ಶಂಕರ್ ಕಟ್ಟಿಸಂಗಾವಿ ಅವರು ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೈಕ್ಷಣಿಕ ಕಡಿತದ ಆದೇಶವನ್ನು ರದ್ದುಪಡಿಸುವಂತೆ, ಸ್ಥಗಿತಗೊಂಡ ಪಿಂಚಣಿ ಹಿಂಬಾಕಿ ಸಹಿತ ಪ್ರಸ್ತುತ ಮ್ಯಾನುವೆಲ್ ಅರ್ಜಿ ಪಡೆದು ಹಣ ಬಿಡುಗಡೆ ಮಾಡುವಂತೆ, ನಗರದಲ್ಲಿ ಜೋಡಿ ಕೊಲೆ ಪ್ರಕರಣದ ಕುಟುಂಬಗಳಿಗೆ ತಲಾ ಐದು ಲಕ್ಷ ರೂ.ಗಳ ಪರಿಹಾರ ಘೋಷಣೆ ಮಾಡುವಂತೆ ಒತ್ತಾಯಿಸಿದರು.
ಕಾರ್ಡ್ ನವೀಕರಣದ ಅವಧಿ ಮೊದಲಿನ ಹಾಗೆ ಮೂರು ವರ್ಷಗಳ ಅವಧಿಯನ್ನು ನಿಗದಿಪಡಿಸುವಂತೆ, ಹೊಸ ತಂತ್ರಾಂಶದ ತಾಂತ್ರಿಕ ತೊಂದರೆಗಳನ್ನು ಸರಿಪಡಿಸುವಂತೆ, ಜಿಲ್ಲೆಯಲ್ಲಿ ಕಾರ್ಮಿಕರಿಗಾಗಿ ಸಮುದಾಯ ಭವನ ನಿರ್ಮಿಸುವಂತೆ, ಜಿಲ್ಲೆಯಲ್ಲಿ ಬಹಳ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್‍ಗಳನ್ನು ಕೂಡಲೇ ಅಂತರ್ ಜಿಲ್ಲಾ ವರ್ಗಾವಣೆ ಮಾಡುವಂತೆ, ನಗರದಲ್ಲಿ ಕಾರ್ಮಿಕರು ಇರುವ ನಾಕಾ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸುವಂತೆ, ಖರೀದಿ ಪ್ರಕ್ರಿಯೆಗಳನ್ನು ಕೂಡಲೇ ನಿಲ್ಲಿಸುವಂತೆ ಅವರು ಆಗ್ರಹಿಸಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊರೋನಾ ಸಂದರ್ಭದಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಲಪಟಾಯಿಸಿತು. ಐದಾರು ಸಾವಿರ ಕೋಟಿ ರೂ.ಗಳನ್ನು ಕಲ್ಯಾಣ ಮಂಡಳಿಯ ಅನುದಾನ ಖಾಲಿ ಮಾಡಲಾಗಿದೆ. ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಖಂಡಿಸಿತ್ತು. ವಿಶೇಷವಾಗಿ ಪ್ರಿಯಾಂಕ್ ಖರ್ಗೆಯವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಮಾಡಿ ಬಿಜೆಪಿ ಸರ್ಕಾರದ ಸಾವಿರಾರು ಕೋಟಿ ರೂ.ಗಳ ಹಗರಣದ ಕುರಿತು ಸಮಗ್ರ ತನಿಖೆಗೆ ಒತ್ತಾಯಿಸಿದ್ದರು. ಹಿಂದಿನ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ಕಾರ್ಮಿಕ ಮಂಡಳಿಯ ಕಾನೂನುಗಳನ್ನು ಬದಿಗೆ ಸರಿಸಿ ಮನಸೋ ಇಚ್ಛೆ ಕಾರ್ಮಿಕರ ಅನುದಾನವನ್ನು ದುರ್ಬಳಕೆ ಮಾಡಿದರು. ವಿವಿಧ ರೀತಿಯ ಕಿಟ್‍ಗಳಾದ ಟ್ಯಾಬ್, ಟೂಲ್, ಶೈಕ್ಷಣಿಕ ಕಿಟ್, ಪೌಷ್ಠಿಕಾಂಶ ಕಿಟ್, ಸುರಕ್ಷಾ ಕಿಟ್‍ಗಳ ಖರೀದಿಯಲ್ಲಿ ಟೆಂಡರ್ ನಿಯಮಗಳನ್ನು ಉಲ್ಲಂಘಿಸಿ, ಹೆಚ್ಚಿನ ಬೆಲೆಯಲ್ಲಿ ಖರೀದಿಸಿ ಕಲ್ಯಾಣ ಮಂಡಳಿಯ ಹಣವನ್ನು ಲೂಟಿ ಮಾಡಿದ್ದರು ಎಂದು ಅವರು ಆರೋಪಿಸಿದರು.
ಹಾಲಿ ಕಾಂಗ್ರೆಸ್ ಸರ್ಕಾರವು ಅಕ್ರಮಕ್ಕೆ ಸಂಬಂಧಿಸಿದಂತೆ ಹೊರತಾಗಿಲ್ಲ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಬಂದ ಮೇಲೆ ಲ್ಯಾಪ್‍ಟಾಪ್, ವೈದ್ಯಕೀಯ ತಪಾಸಣೆ ಹಾಗೂ ಅಂಬುಲೆನ್ಸ್ ವಾಹನಗಳ ಖರೀದಿಯಲ್ಲಿ ಬಹುದೊಡ್ಡ ಅನುದಾನ ದುರುಪಯೋಗ ಮಾಡಿದ್ದಾರೆ. ಸಚಿವರು ಸರ್ವಾಧಿಕಾರ ಮೆರೆಯುತ್ತಿದ್ದಾರೆ. ಕಾರ್ಮಿಕರ ಮಂಡಳಿಯನ್ನು ಪುನರ್ ರಚಿಸದೇ ಎಲ್ಲ ನಿರ್ಧಾರಗಳನ್ನು ಜಾರಿಗೆ ತರಲಾಗುತ್ತಿದೆ. ಹಾಗಾಗಿ ಕೂಡಲೇ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಪುನರ್ ರಚಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀಮಂತ್ ಬಿರಾದಾರ್, ಪ್ರಭುದೇವ್ ಯಳಸಂಗಿ, ಅಶೋಕ್ ಘೂಳಿ, ಹಣಮಂತರಾಯ್ ಬಿ. ಪೂಜಾರಿ, ಮಲ್ಲಿಕಾರ್ಜುನ್ ಮಾಳಗೆ, ಶಿವಲಿಂಗ್ ಹಾವನೂರ್, ನಾಗಯ್ಯ ಜಿ. ಸ್ವಾಮಿ, ಶಿವಕುಮಾರ್ ಮಠಪತಿ, ಶಿವಲಿಂಗಮ್ಮ, ಭೀಮರಾಯ್ ಕಂದಳ್ಳಿ, ಅಲ್ಲಾವುದ್ದೀನ್, ಮೊಹಸೀನ್ ಪಟೇಲ್, ದೇವಿಂದ್ರ ಉಳ್ಳಾಗಡ್ಡಿ, ಸಂಜುಕುಮಾರ್ ಮುಂತಾದವರು ಉಪಸ್ಥಿತರಿದ್ದರು.