ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಾಧಕ ರತ್ನ ಪ್ರಶಸ್ತಿ ಪ್ರಧಾನ
ಕಲಬುರಗಿ:ಜು.5:ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘದ ವತಿಯಿಂದ “ನಮ್ಮ ನಡಿಗೆ, ಹಳ್ಳಿಯ ಕನ್ನಡ ಸರಕಾರಿ ಶಾಲೆಯ ಕಡೆಗೆ” ಎಂಬ ಸಂಕಲ್ಪದೊಂದಿಗೆ ಈ ವರ್ಷ ಗ್ರಾಮೀಣ ಭಾಗದ ಕನ್ನಡ ಸರಕಾರಿ ಶಾಲೆಯಲ್ಲಿ ಅಭ್ಯಾಸ ಮಾಡಿ ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ “ಸಾಧಕ ರತ್ನ” ಸರಣಿ ಕಾರ್ಯಕ್ರಮದ 2ನೇ ಭಾಗವಾಗಿ ಕಲಬುರ್ಗಿ ತಾಲೂಕಿನ ಕಡಣಿ ಗ್ರಾಮದ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ದಿನಾಂಕ 8.07.2024 ರಂದು ಸೋಮವಾರ ಬೆಳಿಗ್ಗೆ 10-45 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷರಾದ, ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ತಿಳಿಸಿದ್ದಾರೆ.
ಶಾಲೆಯ ಮೂಲಭೂತ ಸಮಸ್ಯೆಗಳು ಪರಿಹರಿಸಬೇಕು, ಶಿಕ್ಷಣ ಗುಣ ಮಟ್ಟ ಸುಧಾರಿಸಬೇಕು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶ ಹೆಚ್ಚಿಸಬೇಕು ಅಲ್ಲದೆ ಮುಖ್ಯವಾಗಿ ಗ್ರಾಮೀಣ ಭಾಗದ ಕನ್ನಡ ಸರಕಾರಿ ಶಾಲೆ ಉಳಿಯಬೇಕು ಎಂಬ ಉದ್ದೇಶದಿಂದ ಸರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘವು ಪ್ರತಿ ವರ್ಷ ಗ್ರಾಮೀಣ ಮಟ್ಟದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡುವ ಮೂಲಕ ಸ್ಪೂರ್ತಿ ನೀಡುವುದರೊಂದಿಗೆ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಕಾರ್ಯಕ್ರಮ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಸರಕಾರಿ ಕನ್ನಡ ಪ್ರೌಢ ಶಾಲೆಯಲ್ಲಿರುವ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸರಣಿಯ 2ನೇ ಕಾರ್ಯಕ್ರಮ ಕಲಬುರಗಿ ತಾಲೂಕಾ ದಂಡಾಧಿಕಾರಿಗಳು ಹಾಗೂ ತಹಶೀಲ್ದಾರರಾದ ನಾಗಮ್ಮ ಕಟ್ಟಿಮನಿ ಉದ್ಘಾಟಿಸಲಿದ್ದಾರೆ. ಕಲಬುರಗಿ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿಜಯಕುಮಾರ ಜಮಖಂಡಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರಾದ ಶೇಷಮೂರ್ತಿ ಅವಧಾನಿ, ಕಡಣಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮರೆಮ್ಮ ಶರಣಪ್ಪ, ಉಪಾಧ್ಯಕ್ಷರಾದ ಚನ್ನಬಸಪ್ಪ ಎಸ್. ಚನ್ನಪ್ಪಗೋಳ, ಕಲ್ಯಾಣ ಕರ್ನಾಟಕ ವಕೀಲರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಅಂಬಾರಾಯ ಪಟ್ಟಣಕರ, ಕಡಣಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಗಾಯಿತ್ರಿ ತೆಗ್ಗಳ್ಳಿ, ನ್ಯಾಯವಾದಿ ರಾಮಣ್ಣ ಗೌಳಿ ಆಗಮಿಸಲಿದ್ದಾರೆ. ಕಡಣಿ ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ರವೀಂದ್ರಕುಮಾರ ಹೂಗಾರ ಹಾಗೂ ಹಡಗಿಲಹಾರತಿ ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಚನ್ನಬಸಪ್ಪ ಬಿರಾದಾರ ಉಪಸ್ಥಿತರಿರುವರು. ಸಂಘದ ಸದಸ್ಯರಾದ ದೇವಿಂದ್ರಪ್ಪಾ ಏಕಲೂರ ಸ್ವಾಗತಿಸುವರು. ಶಿವರುದ್ರ ಕರಿಕಲ ವಂದಿಸುವರು. ಕಾರ್ಯಕ್ರಮದಲ್ಲಿ ಕಡಣಿ ಹಾಗೂ ಹಡಗಿಲಹಾರತಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಎರಡು ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಸೇರಿದಂತೆ ಗ್ರಾಮದ ಅನೇಕ ಜನ ಉಪಸ್ಥಿತರಿರುವರೆಂದು ಸಂಘದ ಅಧ್ಯಕ್ಷರಾದ ಅಟ್ಟೂರ ತಿಳಿಸಿದರು. ಸಂಘದ ಕಾರ್ಯದರ್ಶಿ ನಂದೀಶ್ವರ ಪಾಟೀಲ ಸಹಕಾರ್ಯದರ್ಶಿ ಮಲಕಾರಿ ಪೂಜಾರಿ ಉಪಸ್ಥಿತರಿದ್ದರು.