ಜೇವರ್ಗಿ ಜನಸ್ಪಂದನಾ ಸಭೆ:120 ಅರ್ಜಿ ಸಲ್ಲಿಕೆ,25ಕ್ಕೆ ಸ್ಥಳದಲ್ಲಿಯೇ ಪರಿಹಾರ
ಕಲಬುರಗಿ:ಜು.5: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ಬುಮ್ ಅವರು ಶುಕ್ರವಾರ ಜೇವರ್ಗಿ ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಜನಸ್ಪಂದನಾ ಸಭೆ ನಡೆಸಿ ಅವಿಭಜಿತ ಜೇವರ್ಗಿ ತಾಲೂಕಿನ ಸಾರ್ವಜನಿಕರ ಸಮಸ್ಯೆ ಆಲಿಸಿದರು.
ಜನಸ್ಪಂದನಾ ಸಭೆಯಲ್ಲಿ ಸಲ್ಲಿಕೆಯಾದ 120 ಅರ್ಜಿಯಲ್ಲಿ 25ಕ್ಕೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದ ಅವರು, ಬಾಕಿ ಉಳಿದ‌ 95 ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗೆ ರವಾನಿಸಿ, ಕೂಡಲೆ ಇವುಗಳನ್ನು ಪ್ರಥಮಾದ್ಯತೆ ಮೇಲೆ ವಿಲೇವಾರಿ ಮಾಡುವಂತೆ ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಸಿ.ಸಿ.ರಸ್ತೆ, ಚರಂಡಿ ನಿರ್ಮಾಣ, ಕುಡಿಯುವ ನೀರು, ಶೌಚಾಲಯ, ಸಾಮಾಜಿಕ ಪಿಂಚಣಿಗೆ ಸಂಬಂಧಿಸಿದಂತೆ ಹೆಚ್ಚಿನ ದೂರು ದುಮ್ಮಾನುಗಳಿಗೆ ಕಿವಿಯಾದ ಜಿಲ್ಲಾಧಿಕಾರಿಗಳು, ಸಮಸ್ಯೆ ಹೊತ್ತಿ ಬಂದವರಿಗೆ ಕಾನೂನಾತ್ಮಕವಾಗಿ ಕೆಲಸ‌ ಮಾಡಿಕೊಡುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿದ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಮತ್ತು ಬೆಳೆ ಸಮೀಕ್ಷೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿಗಳು, ಬೆಳೆ ವಿಮೆ-ಬರಗಾಲ ಪರಿಹಾರದಂತ ಸವಲತ್ತು ಪಡೆಯಲು ರೈತರು ಕಡ್ಡಾಯವಾಗಿ ಆಧಾರ್ ಸೀಡಿಂಗ್, ಬ್ಯಾಂಕ್‌ನಲ್ಲಿ ಕೆ.ವೈ.ಸಿ ಮಾಡಿಸಿಕೊಳ್ಳಬೇಕೆಂದು ರೈತ ವರ್ಗಕ್ಕೆ ಕರೆ ನೀಡಿದರು.
ಕರಪತ್ರ ಬಿಡುಗಡೆ:
ತೋಟಗಾರಿಕೆ ಇಲಾಖೆಯಿಂದ ಹವಾಮಾನ ಆಧಾರಿತ ತೋಟಗಾರಿಕೆ ಬೆಳೆಗಳಿಗೆ‌ ಬೆಳೆ‌ ವಿಮೆ‌ ಮಾಡಿಸುವ ಸಂಬಂಧ ರೈತರಲ್ಲಿ ಅರಿವು ಮೂಡಿಸಲು ಮುದ್ರಿಸಲಾದ ಕರಪತ್ರಗಳನ್ನು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಅಧಿಕಾರಿಗಳೊಂದಿಗೆ ಸೇರಿ ಬಿಡುಗಡೆಗೊಳಿಸಿದರು. ಜೇವರ್ಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶರಣಗೌಡ ಬೆಳೆ ವಿಮೆ ಬಗ್ಗೆ ಮಾಹಿತಿ ನೀಡಿದರು.
ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ಕೃಷಿ ಉಪನಿರ್ದೇಶಕ ಸೋಮಶೇಖರ ಬಿರಾದಾರ, ಜೇವರ್ಗಿ ತಹಶೀಲ್ದಾರ ಮಲ್ಲಣ್ಣ ಯಲಗೊಂಡ, ಯಡ್ರಾಮಿ ತಹಶೀಲ್ದಾರ ಶಶಿಕಲಾ ಪಾದಗಟ್ಟಿ, ಜೇವರ್ಗಿ ತಾಲೂಕ ಪಂಚಾಯತ್ ಇ.ಓ ರೇವಣಸಿದ್ದಪ್ಪ ಸೇರಿದಂತೆ ಜೇವರ್ಗಿ‌ ಮತ್ತು ಯಡ್ರಾಮಿ ತಾಲೂಕಿನ ಅನೇಕ ತಾಲೂಕಾ‌ ಮಟ್ಟದ ಅಧಿಕಾರಿಗಳು ಇದ್ದರು.