ರಟಕಲ್‍ನಲ್ಲಿ ಬಸವಾದಿ ಶರಣರ ವಚನ ಸಂಗಮ
ಕಲಬುರಗಿ:ಜು.5:ಜಿಲ್ಲೆಯ ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದ ಶ್ರೀ ಸಂಗಮೇಶ್ವರ್ ದೇವಸ್ಥಾನದಲ್ಲಿ ಜುಲೈ 7ರಂದು ಬಸವಾದಿ ಶರಣರ ವಚನ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಶಿವರಾಜ್ ಚೋಕಾ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರನ್ನು ಸಾಂಸ್ಕøತಿಕ ನಾಯಕರನ್ನಾಗಿ, ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರ, ಮೌಢ್ಯತೆ ನಿವಾರಣೆಗಾಗಿ, ಬಸವತತ್ವ ಜನರಲ್ಲಿ ಬಿತ್ತರಿಸುವುದಕ್ಕಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜಕೀಯ ಗಣ್ಯರು, ಮಠಾಧೀಶರು, ಸಾಹಿತಿಗಳು, ಕಲಾವಿದರು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 3000ಕ್ಕಿಂತ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ ಎಂದು ಹೇಳಿದ ಅವರು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಭಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಶಿವಾನಂದ್ ಸ್ವಾಮೀಜಿ, ಭರತನೂರಿನ ಗುರು ನಂಜೇಶ್ವರ್ ಮಹಾಸ್ವಾಮೀಜಿ, ರಟಕಲ್‍ನ ರೇವಣಸಿದ್ಧ ಶಿವಾಚಾರ್ಯರು, ಕೋಡ್ಲಿಯ ಬಸವಲಿಂಗ ಶಿವಾಚಾರ್ಯರು, ಸೂಗೂರ್ (ಕೆ)ದ ಡಾ. ರುದ್ರಮುನಿ ಶಿವಾಚಾರ್ಯರು, ಚಂದನಕೇರಾದ ರಾಚೋಟೇಶ್ವರ್ ಶಿವಾಚಾರ್ಯರು, ಹೊಸಳ್ಳಿಯ ಶಿವಲಿಂಗ ಶಿವಾಚಾರ್ಯರು, ಐನಾಪುರದ ಪಂಚಾಕ್ಷರಿ ದೇವರು, ರಟಕಲ್‍ನ ಸಿದ್ಧ ಶಿವಯೋಗಿಗಳು, ಅಧ್ಯಕ್ಷತೆಯನ್ನು ಜಿಲ್ಲಾ ನ್ಯಾಯಾಧೀಶ ಬೆನಕನಳ್ಳಿಯ ಚನ್ನಮಲ್ಲಪ್ಪ ಅವರು ವಹಿಸುವರು ಎಂದರು.
ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಜ್ಯೋತಿ ಬೆಳಗಿಸುವರು. ರಾಜ್ಯದ ಅರಣ್ಯ ಮತ್ತು ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಸಸಿಗೆ ನೀರುಣಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ವಿಧಾನ ಪರಿಷತ್ ಸದಸ್ಯ ಜಗದೇವ್ ಗುತ್ತೇದಾರ್ ಕಾಳಗಿ, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಠೋಡ್, ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ಶರಣಕುಮಾರ್ ಮೋದಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಶರಣಬಸಪ್ಪ ಭೂಸನೂರು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದೀಪಕನಾಗ್ ಪುಣ್ಯಶೆಟ್ಟಿ ಅವರು ಆಗಮಿಸುವರು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರೇವಣಸಿದ್ಧ ಶಿವಾಚಾರ್ಯರು, ಸಿದ್ಧರಾಮ್ ಸ್ವಾಮೀಜಿ, ರಟಕಲ್ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗೌರಿಶಂಕರ್ ಕಿಣ್ಣಿ, ವೀರಣ್ಣಾ ಗಂಗಾಣಿ ಮುಂತಾದವರು ಉಪಸ್ಥಿತರಿದ್ದರು.