ಚಿತ್ರದುರ್ಗದಲ್ಲಿ ಜು. 20ರಂದು ಇಮ್ಮಡಿ ಸಿದ್ಧರಾಮೇಶ್ವರರ ದೀಕ್ಷಾ ರಜತ ಮಹೋತ್ಸವ
ಕಲಬುರಗಿ:ಜು.5: ಚಿತ್ರದುರ್ಗದ ಭೋವಿ ಗುರುಪೀಠದ ಆವರಣದಲ್ಲಿ ಜುಲೈ 20ರಂದು ಇಮ್ಮಡಿ ಸಿದ್ಧರಾಮೇಶ್ವರರ ದೀಕ್ಷಾ ರಜತ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್ ಎಸ್., ಅವರು ಹೇಳಿದರು.
ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಮುದಾಯದ ಜನರು, ದೇಶದ ಬೇರೆ, ಬೇರೆ ರಾಜ್ಯಗಳಿಂದ ಸಮುದಾಯದ ಮುಖಂಡರು ಭಾಗವಹಿಸುವರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸುವರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೃತಿ ಬಿಡುಗಡೆ ಮಾಡುವರು. ಕನ್ನಡ ಮತ್ತು ಸಂಸ್ಕøತಿ ಖಾತೆ ಸಚಿವ ಶಿವರಾಜ್ ತಂಗಡಗಿ ಅವರು ಅಧ್ಯಕ್ಷತೆ ವಹಿಸುವರು ಎಂದರು.
ಮಾಜಿ ಸಚಿವ ಅರವಿಂದ್ ಲಿಂಬಾವಳಿ ಅವರು ನೇತೃತ್ವ ವಹಿಸುವರು. ಸಮುದಾಯದ ಹಾಲಿ, ಮಾಜಿ ಸಚಿವರು, ಶಾಸಕರು, ಸಂಸದರು ಸಾರಥ್ಯದಲ್ಲಿ ಮಂತ್ರಾಲಯದ ಸುಭುದೇಂದ್ರ ತೀರ್ಥರು, ಕನಕ ಗುರುಪೀಠದ ಜಗದ್ಗುರುಗಳು, ಹಿಂದುಳಿದ ದಲಿತ ಮಠಾಧೀಶರು ಸೇರಿದಂತೆ ರಾಜ್ಯದ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಅದೇ ದಿನದಂದು ಬೆಳಿಗ್ಗೆ ಧರ್ಮ ಸಂಸತ್ ಕಾರ್ಯಕ್ರಮ ಜರುಗುವುದು ಎಂದು ಅವರು ಹೇಳಿದರು.
ವಲಸೆ ಜೀವನದಲ್ಲಿ ಹರಿದು ಹಂಚಿ ಹೋಗಿರುವ ಜನಾಂಗಕ್ಕೆ ವೇದಿಕೆಯಾಗಿ ಭೋವಿ ಗುರುಪೀಠ ಶಾಶ್ವತವಾಗಿ ಜನಾಂಗದ ಬೆಳಕಾಗಿ ಉನ್ನತ ಆದಿಯಲ್ಲಿ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರರ ಮಾರ್ಗದರ್ಶನದಲ್ಲಿ ಒಡಮೂಡುತ್ತಿದೆ. ಸ್ವಾಮೀಜಿಯವರ ಜನ್ಮ ದಿನವನ್ನು ರಾಷ್ಟ್ರೀಯ ಭೋವಿ ಜನ್ಮದಿನೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸಮಾಜ ಸೇವಾ ದೀಕ್ಷಾ ನೆನಪು ಹಾಗೂ ಪಟ್ಟಾಭಿಷೇಕದ ಸಂಭ್ರಮದ ನಿಮಿತ್ಯ ಸಂಸದರಾಗಿ, ಶಾಸಕರಾಗಿ, ವಿವಿಧ ಹಂತದ ಜನಪ್ರತಿನಿಧಿಗಳಿಗೆ ಅಭಿನಂದಿಸುವುದು, ಪ್ರತಿಭಾ ಪುರಸ್ಕಾರ, ವಧು-ವರರ ಸಮಾವೇಶ, ಸಮಾಜದ ಬೆಳವಣಿಗೆ ಕುರಿತು ಸಂವಾದ, ರಕ್ತದಾನ ಶಿಬಿರ, ಪಿಎಚ್‍ಡಿ ಪದವೀಧರರು ಮತ್ತು ಐಎಎಸ್, ಕೆಎಎಸ್ ಸಾಧಕರಿಗೆ ಸನ್ಮಾನ, ವೈದ್ಯಕೀಯ ಪದವಿಯನ್ನು ಪೂರೈಸಿದವರಿಗೆ ಅಭಿನಂದನೆಗಳು ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಉತ್ಸವವೇ ರಾಷ್ಟ್ರೀಯ ಜನ್ಮೋತ್ಸವ. ಇದು ಭೋವಿ ಸಮುದಾಯದಲ್ಲಿ ಇನ್ನಷ್ಟು ಪ್ರೇರಕ ಶಕ್ತಿಯಾಗಿ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು.
ಭೋವಿ ಜನ್ಮೋತ್ಸವ ಸಂಘಟನೆಯ ಸಿಂಹಾವಲೋಕನವನ್ನು ಗಮನಿಸಿದರೆ ಸಮುದಾಯವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಗಳನ್ನು ಮಾಡಲಾಗುತ್ತಿದೆ. ತಲುಪಿ ರಾಷ್ಟ್ರೀಯ ಭೋವಿ ಜನ್ಮೋತ್ಸವವಾಗಿ ಹೊರಹೊಮ್ಮಿದೆ. ಶೋಷಿತ ಸಮುದಾಯಕ್ಕೆ ರಾಜಕೀಯ ಅಧಿಕಾರ ಅಗತ್ಯ ಎನ್ನುವ ಜಾಗೃತಿಯನ್ನು ಮೂಡಿಸಿದೆ. ರಾಜಕೀಯ, ಸಾಮಾಜಿಕ ಪ್ರಜ್ಞೆ ಮೂಡಿಸುವಲ್ಲಿ ಮಠ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.
ಭೋವಿ ಸಮುದಾಯವನ್ನು ಕಟ್ಟುವಲ್ಲಿ ಸ್ವಾಮೀಜಿಯವರ ಶ್ರಮ ಅಪಾರವಾಗಿದೆ. ಪರಿಶ್ರಮದ ಫಲವಾಗಿ ಹಲವಾರು ಗ್ರಾಮಗಳು ವ್ಯಸನಮುಕ್ತವಾಗಿವೆ. ಪ್ರಾಣಿ ಬಲಿ ನಿಷೇಧಕ್ಕೆ ವಾಗ್ದಾನವನ್ನು ನೀಡಿವೆ. ವರ್ಷಕ್ಕೆ ಒಮ್ಮೆ ಜರುಗುವ ಮಾರಮ್ಮ, ಹುಲಿಗೆಮ್ಮ ಜಾತ್ರೆಗಳು ಸಮುದಾಯದ ಆರ್ಥಿಕತೆ ಮೇಲೆ ಬೀರುವ ಪರಿಣಾಮಗಳ ಕುರಿತು ಸ್ವಾಮೀಜಿ ಅವರಿಗೆ ಸ್ಪಷ್ಟತೆ ಇದ್ದುದರಿಂದ ಗಳಿಕೆ, ಬಳಕೆ, ಉಳಿಕೆ ಸೂತ್ರವನ್ನು ಭಕ್ತರ ಮುಂದಿಟ್ಟರು. ಅದನ್ನು ಅರಿತವರು ಜಾತ್ರೆಗಳ ನೆಪದಲ್ಲಿ ದುಂದುವೆಚ್ಚ ಮಾಡುವುದು ನಿಲ್ಲಿಸಿದ್ದಾರೆ. ಭಕ್ತರು ಧರ್ಮದ ಹೆಸರಿನಲ್ಲಿ ಅಧರ್ಮ ನಡೆಸಬಾರದು. ಮಾಂಸ, ಹೆಂಡ, ಜೂಜು ಸಮುದಾಯವನ್ನು ಹಾಳು ಮಾಡುತ್ತಿದೆ. ಹೀಗಾಗಿ ಬದಲಾವಣೆ ಹೊಂದಬೇಕು ಎನ್ನುವ ಮನವರಿಕೆ ಮಾಡಿಕೊಡುವಲ್ಲಿ ಶ್ರೀಗಳು ನಿರತರಾಗಿದ್ದಾರೆ ಎಂದು ಅವರು ತಿಳಿಸಿದರು.
ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡಲು ಶ್ರೀಗಳು ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಉಚಿತ ಶಿಕ್ಷಣ ಮತ್ತು ವಸತಿಯನ್ನು ಒದಗಿಸುತ್ತಿದ್ದಾರೆ. ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಅನಾಥಾಶ್ರಮ ಮೂಡದಂತೆ ಬೆಳೆಯಬೇಕು ಎಂಬ ಉದ್ದೇಶದಿಂದ ಅಂತಹ ಮಕ್ಕಳನ್ನು ಗುರುತಿಸಿ ಶ್ರೀಮಠವೇ ಪದವಿ, ಇಂಜಿನಿಯರಿಂಗ್‍ವರೆಗೆ ಉಚಿತ ಶಿಕ್ಷಣ ಮತ್ತು ವಸತಿಯನ್ನು ಕಲ್ಪಿಸಿದೆ. ಉದ್ಯೋಗ, ಸಾಮಾಜಿಕ ಕಾರ್ಯಗಳನ್ನು ಒದಗಿಸುವ ಮೂಲಕ ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದ್ದರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ್ ಸ್ವಾಮೀಜಿ, ರಾಜು ಗುತ್ತೇದಾರ್, ಗುಂಡಪ್ಪ ಸಾಳಂಕೆ, ರಾಮಯ್ಯ ಪೂಜಾರಿ, ಜಿ. ಶಿವಶಂಕರ್, ಮಲ್ಲಿಕಾರ್ಜುನ್ ಕುಸ್ತಿ, ನಾಗೇಶ್ ಜಿ. ಕುಶಾಳಕರ್, ಸಿದ್ಧರಾಮ್ ದಂಡಗುಲಕರ್, ಲಕ್ಷ್ಮಣ್ ಕೋಡ್ಲಿ, ರಾಘು ಬಸ್ಕರಿ ಮುಂತಾದವರು ಉಪಸ್ಥಿತರಿದ್ದರು.