ಮಣ್ಣನ್ನು ಗೌರವಿಸುವ ಪ್ರತೀಕದ ಮಣ್ಣೆತ್ತಿನ ಹಬ್ಬ
ಕಲಬುರಗಿ:ಜು.5: ಮಾನವ ಮತ್ತು ಮಣ್ಣಿಗೆ ಅವಿನಾಭಾವ ಸಂಬಂಧವಿದೆ. ರೈತರು ಕೃಷಿ ಮಾಡಿ ಆಹಾರವನ್ನು ಬೆಳೆಯಲು ಮಣ್ಣು ಅವಶ್ಯಕವಾಗಿದೆ. ಎತ್ತುಗಳು ರೈತನ ಪ್ರಮುಖ ಸಾಧನಗಳಾಗಿವೆ. ಮಣ್ಣು ಮತ್ತು ಎತತುಗಳಿಗೆ ಗೌರವ ಸಲ್ಲಿಸುವ ಮುಂಗಾರಿನ ಹಬ್ಬ ಮಣ್ಣೆತ್ತಿನ ಅಮವಾಸ್ಯೆಯಾಗಿದೆ ಎಂದು ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಹೇಳಿದರು.
ಕಾಳಗಿ ತಾಲೂಕಿನ ಶೆಳ್ಳಗಿ ಗ್ರಾಮದ ವೃತ್ತಿ ಕುಂಬಾರರಾದ ಪಾರ್ವತಿ ಬಸವರಾಜ ಕುಂಬಾರ ದಂಪತಿಗೆ ಮಣ್ಣೆತ್ತಿನ ಅಮವಾಸ್ಯೆ ಪ್ರಯುಕ್ತ ‘ಕನ್ನಡ ಜಾನಪದ ಪರಿಷತ್’ನ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಜರುಗಿದ ಗೌರವ ಸತ್ಕಾರ, ಮಣ್ಣೆತ್ತುಗಳಿಗೆ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಸತ್ಕರಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ರೈತ ದೇಶದ ಆಧಾರ ಸ್ಥಂಭ. ಕೃಷಿ ಕಾರ್ಯದ ಪ್ರಮುಖವಾದ, ಆತ ಬೆಳೆಯುವ ಪ್ರತಿ ಕಾಳಿನಲ್ಲಿ ತನ್ನದೆ ಆದ ಅದ್ವೀತಿಯ ಶ್ರಮವನ್ನು ಹೊಂದಿರುವ ಎತ್ತುಗಳನ್ನು ಪೂಜಿಸಲಾಗುತ್ತದೆ. ಕಾರ ಹುಣ್ಣಿಮೆಯ ನಂತರ ಬರುವ ಜಾನಪದ ಹಬ್ಬ ಇದಾಗಿದ್ದು, ರೈತರು ಸಂಭ್ರಮ ಪಡುತ್ತಾರೆ ಎಂದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ವೃತ್ತಿ ಕುಂಬಾರ ರಾಜಕುಮಾರ ಕುಂಬಾರ, ನಮ್ಮ ವೃತ್ತಿಗೆ ಮಣ್ಣೆ ಆಧಾರ. ಮಣ್ಣಿನೊಂದಿಗೆ ಬೆರೆತು ಮಾಡುವ ಪವಿತ್ರ ಕಾಯಕ ಕುಂಬಾರಿಯಾಗಿದೆ. ಆಧುನಿಕತೆಯಿಂದಾಗಿ ನಮ್ಮ ವೃತ್ತಿಗೆ ತೊಂದರೆಯಾಗುತ್ತಿದೆ. ಇಂದಿಗೂ ಕೂಡಾ ಕುಂಬಾರಿಕೆ ವೃತ್ತಿಯನ್ನು ಮುಂದುವರೆಸಿರುವವರಿಗೆ ಆರ್ಥಿಕ ಭದ್ರತೆಯ ಯೋಜನೆಗಳನ್ನು ಸಮರ್ಪಕವಾಗಿ ದೊರೆಯಬೇಕಾಗಿದೆ ಎಂದು ಒತ್ತಾಸೆ ಮಾಡಿದರು.
ಕಾರ್ಯಕ್ರಮದಲ್ಲಿ ಕಜಾಪ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಪಾಟೀಲ, ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಝಾಪುರ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿ, ನಿವೃತ ಮುಖ್ಯ ಶಿಕ್ಷಕ ಪ್ರಮುಖರಾದ ದೇವೇಂದ್ರ ಬಡಿಗೇರ, ಪ್ರಮುಖರಾದ ಬಸವರಾಜ ಕುಂಬಾರ, ಲಕ್ಷ್ಮೀಬಾಯಿ ಕುಂಬಾರ, ಪಾರ್ವತಿ, ತೃಪ್ತಿ, ಮಲ್ಲಿಕಾರ್ಜುನ, ನಾಮದೇವ ರಾಠೋಡ ಸೇರಿದಂತೆ ಇನ್ನಿತರರಿದ್ದರು.