ಜೆಡಿಎಸ್ ಸದಸ್ಯತ್ವ ನೋಂದಣಿಗೆ ಚಾಲನೆ
ಕೆ.ಆರ್.ಪುರ, ಸೆ.೨೭-ಕೆ.ಆರ್.ಪುರ ಕ್ಷೇತ್ರದಲ್ಲಿ ಜೆಡಿಎಸ್ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಜೆಡಿಎಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಅವರು ಚಾಲನೆ ನೀಡಿದರು. ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಿ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವಂತೆ ಕಿವಿಮಾತು ಹೇಳಿದರು.
ಜೆಡಿಎಸ್ ಸದಸ್ಯತ್ವ ಗುರಿ ಹೆಚ್ಚಿಸಲು ಪಕ್ಷದ ಸಕ್ರಿಯ ಕಾರ್ಯಕರ್ತರು ಹಾಗು ಯುವಕರು ಸದಸ್ಯತ್ವ ಅಭಿಯಾನದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ.
ಕ್ಷೇತ್ರದಲ್ಲಿ ಜೆಡಿಎಸ್ ಕನಿಷ್ಠ ಎರಡು ಬಿಬಿಎಂಪಿ ಸ್ಥಾನದಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಂಡು ಬರಲು ಕಾರ್ಯಕರ್ತರು ಸಿದ್ಧರಾಗ ಬೇಕು, ಅದಕ್ಕಾಗಿ ಹೆಚ್ಚು ಸದಸ್ಯತ್ವ ಮಾಡಿಸಲು ಶ್ರಮಿಸಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಮಾತನಾಡಿ, ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರ ಜನಪ್ರಿಯ ಯೋಜನೆ ಗಳು ಹಾಗೂ ರೈತರ ಸಾಲ ಮನ್ನಾಮಾಡುವ ಮೂಲಕ ಅನೇಕ ಕ್ರಾಂತಿಕಾರಿಕ ಯೋಜನೆಗಳನ್ನು ಕೈಗೊಂಡಿದ್ದರು, ಪಕ್ಷ ಬಲಿಷ್ಠಗೊಳಿಸಲು ತಳಮಟ್ಟದಲ್ಲಿ ಸಂಘಟನೆಗೆ ಆದ್ಯತೆ ನೀಡುವ ಮೂಲಕ ಕುಮಾರಸ್ವಾಮಿ ಅವರ ಕೈಬಲಪಡಿಸಬೇಕು ಎಂದು ಹೇಳಿದರು.ಕ್ಷೇತ್ರದ ಅಧ್ಯಕ್ಷ ಡಿ.ಎ.ಸುರೇಶ್ ಅವರು ಮಾತನಾಡಿ ಕೆ.ಆರ್ ಪುರದಲ್ಲಿ ಸಂಘಟನೆ ಕೊರತೆ ಇದ್ದು,ಮುಂದಿನ ದಿನಗಳಲ್ಲಿ ಸ್ಥಳೀಯ ಕಾರ್ಯಕರ್ತರ ಸಹಕಾರ ಹಾಗು ಪಕ್ಷ ತೊರೆದಿ ರುವ ಮುಖಂಡರನ್ನು ಮತ್ತೆ ಪಕ್ಷಕ್ಕೆ ವಾಪಸ್ಸು ತರುವ ಮೂಲಕ ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ನಗರ ಜಿಲ್ಲಾ ಮಹಿಳಾ ಅಧ್ಯಕ್ಷೆ ಶೈಲಜಾ,ಕಾರ್ಯಾಧ್ಯಕ್ಷ ನಾರಾಯಣಸ್ವಾಮಿ, ಕಾರ್ಮಿಕ ಘಟಕ ಅಧ್ಯಕ್ಷ ಗೋಪಾಲ್, ಸೇವಾದಳ ಘಟಕ ಮಹೇಶ್ ಮುಖಂಡರಾದ ರಾಮಮೂರ್ತಿ ನಗರ ರವಿಕುಮಾರ್, ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಜರಿದ್ದರು.