ಸಂಗೀತೋತ್ಸವ ಕಾರ್ಯಕ್ರಮ
ಕುಂದಗೋಳ ಸೆ. 27 : ವಿಶ್ವ ವಿಖ್ಯಾತ ನಾಡಗೀರ ವಾಡೆ ಸಂಗೀತವು ಯಾವುದೇ ಕಾಲಕ್ಕೂ ಕೊನೆಯಾಗಬಾರದು ಎಂದು ರಾಜ್ಯ ಸಭಾ ಸದಸ್ಯೆ ಹಾಗೂ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರು ಹೇಳಿದರು.
ನಾಡಗೀರ ವಾಡೆಯಲ್ಲಿ ಪ್ರತಿವರ್ಷ ಜರುಗುವ ಪುಣ್ಯ ಸಂಗೀತೋತ್ಸವ ಕಾರ್ಯಕ್ರಮದನ್ವಯ ವಿಧಿವತ್ತಾಗಿ ಸವಾಯಿ ಗಂಧರ್ವರ ಪುತ್ಥಳಿಗೆ ಪೂಜಿಸಿ, ಮಾಲಾರ್ಪಣೆ ಮಾಡಿದ ಅವರು ಮಾತನಾಡಿ ಎರಡು ವರ್ಷಗಳಿಂದ ವಾಡೆಯಲ್ಲಿ ಸಂಗೀತ ಕಚೇರಿ ನಡೆಯುತ್ತಿಲ್ಲ. ಹೀಗಾಗಬಾರದು, ಈ ಸ್ಥಳವು ನಮ್ಮ ನಾಡಿಗೆ ಹಾಗೂ ರಾಷ್ಟ್ರಕ್ಕೆ ಅತ್ಯುತ್ತಮ ಸಂಗೀತಗಾರರನ್ನು ನೀಡಿದ್ದು, ಅವರೆಲ್ಲರ ಸೇವೆ ಅವಿಸ್ಮರಣೀಯ. ಹಾಗಾಗಿ ಕುಂದಗೋಳದ ಈ ಪ್ರಸಿದ್ಧಿ ವಾಡೆಯಲ್ಲಿ ಸಂಗೀತ ಕಚೇರಿ ಜರುಗುವಂತಾಗಿ, ಸಂಗೀತಾಸಕ್ತರ ಭಾವನೆಗಳು ಮತ್ತೆ ಪುಟಿದೇಳುವಂತಾಗಲಿ ಎಂದರು. ಇದಕ್ಕೂ ಮುನ್ನ ಕುಂದಗೋಳ ಸವಾಯಿ ಗಂಧರ್ವರ ಸಭಾಭವನದಲ್ಲಿ ಜರುಗಿದ ಅಹೋರಾತ್ರಿ ಸಂಗೀತ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಡಾ. ಅಶೋಕ ಹುಗ್ಗಣ್ಣವರ, ಕೆ. ಆರ್. ನಾಡಗೀರ, ಅರ್ಜುನ್ ನಾಡಗೀರ ಸೇರಿದಂತೆ ಇತರರಿದ್ದರು.