ಕುಡಿತದ ಚಟಕ್ಕಾಗಿ ವ್ಯಕ್ತಿ ಕೊಲೆ: ಆರೋಪಿ ಸೆರೆ
ಕಲಬುರಗಿ,ಜು.5-ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದೇವಲಗಾಣಗಾಪುರ ಸಮೀಪದ ಸಂಗಮ ಹತ್ತಿರ ಹೊಲದಲ್ಲಿ ಈಚೆಗೆ ನಡೆದ ಮಹಾರಾಷ್ಟ್ರ ಮೂಲದ ಮಹೇಶ ತಂದೆ ಅಂಕುಶ ಕೋಲತೆ (29) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಸತಾರ ಜಿಲ್ಲೆಯ ಮಲ್ಹಾರ್ ಪೇಟ್ ನಿವಾಸಿ ನವನಾಥ ಅಶೋಕ ಮಹಾಪುರೆ (33) ಬಂಧಿತ ಆರೋಪಿ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪುರಂದರ ತಾಲ್ಲೂಕಿನ ಪಿಸರ್ವೇ ಗ್ರಾಮದಿಂದ ದೇವಲಗಾಣಗಾಪುರಕ್ಕೆ ಆಗಮಿಸಿದ್ದ ಮಹೇಶ್‍ನನ್ನು ಸಂಗಮ ಹತ್ತಿರದ ಹೊಲದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಮೃತ ಮಹೇಶ್ ಸಹೋದರ ಧೀರಜ್ ಕೋಲತೆ ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ಎಸ್‍ಪಿ ಅಕ್ಷಯ ಹಾಕೆ, ಹೆಚ್ಚುವರಿ ಎಸ್‍ಪಿ ಎನ್.ಶ್ರೀನಿಧಿ, ಆಳಂದ ಡಿಎಸ್‍ಪಿ ಗೋಪಿ ಬಿ.ಆರ್.ಅವರ ಮಾರ್ಗದರ್ಶನದಲ್ಲಿ ಅಫಜಲಪುರ ಸಿಪಿಐ ಚನ್ನಯ್ಯ ಎಸ್.ಹಿರೇಮಠ, ದೇವಲಗಾಣಗಾಪುರ ಪಿಎಸ್‍ಐ ರಾಹುಲ್ ಪವಾಡೆ, ಅಫಜಲಪುರ ಪಿಎಸ್‍ಐ ಸಿದ್ದೇಶ್ವರ ಗರಡೆ ಮತ್ತು ಸಿಬ್ಬಂದಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸರಾಯಿ ಕುಡಿಯುವ ಚಟಕ್ಕಾಗಿ ಮಹೇಶ್ ಹತ್ತಿರವಿದ್ದ 3,600 ರೂ.ಕಿತ್ತುಕೊಂಡು ಆತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರವುದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ನವನಾಥ ವಿರುದ್ಧ ಮಹಾರಾಷ್ಟ್ರ ಸತಾರ ಸಿಟಿ ಪೊಲೀಸ್ ಠಾಣೆಯಲ್ಲಿ ಹೊಡೆದಾಟ, ಕಳ್ಳತನ, ಆತ್ಮಹತ್ಯೆ ಯತ್ನ, ಅಕ್ರಮ ಶಸ್ತ್ರಾಸ್ತ್ರ ಸಾಗಾಣಿಕೆಗೆ ಸಂಬಂಧಿಸಿದಂತೆ 4 ಪ್ರಕರಣಗಳು ದಾಖಲಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಸಿದ್ದಾರೆ.