ಅಕ್ಕ ಮಹಾದೇವಿ ವಿವಿಯಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯ ಆರಂಭಕ್ಕೆ ದಲಿತ ವಿದ್ಯಾರ್ಥಿ ಪರಿಷತ್ ಆಗ್ರಹ
ವಿಜಯಪುರ,ಜು.5: ನಗರದಲ್ಲಿ ಇರುವ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ನೂತನ ವಸತಿ ನಿಲಯ ಮಂಜೂರು ಮಾಡಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಶಿ ಆನಂದ ಅವರಿಗೆ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಮುಖಂಡ ಅಕ್ಷಯಕುಮಾರ ಅಜಮನಿ ಮಾತನಾಡಿ, ಕರ್ನಾಟಕ ರಾಜ್ಯದ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಇರುವ ಏಕೈಕ ಮಹಿಳಾ ವಿಶ್ವವಿದ್ಯಾಲಯವಾದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ರಾಜ್ಯದ ನಾನಾ ಭಾಗಗಳಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ, ಈ ವರ್ಷವೂ ಕೂಡಾ ಹೆಚ್ಚಿನ ವಿದ್ಯಾರ್ಥಿನಿಯರು ಕೋರ್ಸ್‍ಗಳಿಗೆ ಪ್ರವೇಶ ಪಡೆದುಕೊಂಡಿರುವುದರಿಂದ ವಿದ್ಯಾರ್ಥಿಗಳಿಗೆ ಕ್ಯಾಂಪಸ್‍ನಲ್ಲಿ ಈಗಿರುವ ವಸತಿ ನಿಲಯಗಳಲ್ಲಿ ಅವಕಾಶ ಸಿಗದೇ ಹೊರಗಡೆ ರೂಮ್ ಮಾಡಿಕೊಂಡು ಓದುವುದು ಕಷ್ಟದ ಸಂಗತಿ ಆಗಿದೆ, ಅದರಲ್ಲೂ ಕಾಲೇಜಿನ ಸಮಯಕ್ಕೆ ಸರಿಯಾಗಿ ಬಸ್‍ಗಳಿಲ್ಲದೆ ಕ್ಲಾಸ್‍ಗಳನ್ನು ತಪ್ಪುವ ಸಂಭವ ಉಂಟಾಗಿದೆ. ಪ್ರತಿದಿನ ಕಾಲೇಜಿನಿಂದ ರೂಮಿಗೆ ರೂಮಿನಿಂದ ಕಾಲೇಜಿಗೆ ಓಡಾಡುವದರಿಂದ ವಿದ್ಯಾಭ್ಯಾಸದಲ್ಲಿ ಕುಂಠಿತವಾಗುತ್ತಿದೆ ಎಂದಿದ್ದಾರೆ.
ಅದಕ್ಕಾಗಿ ಹೆಣ್ಣು ಮಕ್ಕಳ ರಕ್ಷಣೆ ಮತ್ತು ಹಿತದೃಷ್ಟಿಯಯಿಂದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ರಾಜ್ಯ ಸರ್ಕಾರ ನೂತನವಾಗಿ ಮಂಜುರಾಗಿರುವ ವಸತಿ ನಿಲಯಗಳಲ್ಲಿ ಎರಡನ್ನು ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗಡೆ ಸ್ಥಾಪಿಸಬೇಕೆಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾದೇಶ ಚಲವಾದಿ, ಸತೀಶ ಅಂಜುಟಗಿ, ಯಾಸೀನ ಇನಾಮಾದಾರ, ಸಂದೇಶ ಕುಮಟಗಿ, ರವಿ ವಾಲಿಕಾರ, ಪ್ರವೀಣ ಬನಸೋಡೆ, ಮಾಂತೇಶ ಚಲವಾದಿ, ಯುವರಾಜ್ ಓಲೆಕಾರ ಸೇರಿದಂತೆ ಮುಂತಾದವರು ಭಾಗಿಯಾಗಿದ್ದರು.