ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಇರಲಿ: ಬುಳ್ಳಾ
ವಾಡಿ:ಜು.5: ಮಳೆಗಾಲದಲ್ಲಿ ಡೆಂಗಿ, ಚಿಕ್ಕನ್ ಗುನ್ಯಾ, ಟೈಫಾಯ್ಡ್, ಮಲೇರಿಯಾ ಅಂತಹ ರೋಗಗಳು ಹರಡುವ ಸಾಧ್ಯತೆಯಿದ್ದು ಸಾರ್ವಜನಿಕರು ತಮ್ಮ ಪರಿಸರವನ್ನು ಶುದ್ಧವಾಗಿಟ್ಟುಕೊಳ್ಳುವ ಮೂಲಕ ಸೊಳ್ಳೆಗಳ ನಿಯಂತ್ರಣಕ್ಕೆ ಮುಂದಾಗಬೇಕು. ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗೆ ಆರೋಗ್ಯ ಇಲಾಖೆ ಜೋತೆ ಸಹಕರಿಸಬೇಕು ಎಂದು ಕ್ಷೇತ್ರ ಆರೋಗ್ಯ ನೀರಿಕ್ಷಣಾಧಿಕಾರಿ ಮಂಜುಳಾ ಬುಳ್ಳಾ ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರ ವಾಡಿ ಹಾಗೂ ಆರೋಗ್ಯ ಉಪಕೇಂದ್ರ ಕಮರವಾಡಿ ಸಹಯೋಗದಲ್ಲಿ ಕಮರವಾಡಿ ಗ್ರಾಮದಲಿ ಗುರುವಾರ ಆಯೋಜಿಸಿದ್ದ ವಿಶ್ವ ಜನಸಂಖ್ಯೆ ನಿಯಂತ್ರಣಾ ಅರಿವು ಹಾಗೂ ಸಾಂಕ್ರಾಮಿಕ ರೋಗಗಳ ಕುರಿತಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತಾದ ಜಾಗೃತಿ ಕಾರ್ಯಕ್ರಮದ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಗ್ರಾಮದಲ್ಲಿ ಚರಂಡಿ ನೀರು ನಿಂತು ಅದು ಸೊಳ್ಳೆಗಳ ಉತ್ಪಾದನಾ ತಾಣವಾಗಿ ಬದಲಾಗುತ್ತದೆ. ಅಲ್ಲಿ ಲಕ್ಷಾಂತರ ಸೊಳ್ಳೆಗಳು ಉತ್ಪತ್ತಿಯಾಗಿ ಮಾನವರ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತವೆ. ಸೊಳ್ಳೆ ಕಡಿತದಿಂದ ಮಲೇರಿಯ, ಚಿಕನ್ ಗುನ್ಯಾ, ಡೆಂಗ್ಯೂ ಹೀಗೆ ನಾನಾ ರೀತಿಯ ಸಂಕ್ರಾಮಿಕ ಕಾಯಿಲೆಗಳು ಕಾಣಿಸಿಕೊಂಡು ಒಬ್ಬರಿಂದ ಇನ್ನೊಬ್ಬರಿಗೆ ವೇಗವಾಗಿ ಹರಡುತ್ತವೆ. ಇದಕ್ಕೆ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವೊಂದೇ ರಾಜಮಾರ್ಗವಾಗಿದೆ ಎಂದು ಸಲಹೆ ನೀಡಿದರು.
ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಸುಧಾರಾಣಿ ದೇಸಾಯಿ, ತಯಾರಿಸಿದ ಆಹಾರದ ಮೇಲೆ ನೊಣಗಳು ಕೂಡ ದಂತೆ ಎಚ್ಚರಿಕೆ ವಹಿಸಬೇಕು. ಬಿಸಿಯಾದ ಆಹಾರ ಮಾತ್ರ ಸೇವಿಸಬೇಕು. ಎಲ್ಲೆಂದರಲ್ಲಿ ಮಲಮೂತ್ರ ವಿಸರ್ಜನೆ ಮಾಡಬಾರದು. ಮನೆಯಲ್ಲಿ ನೀರು ಬಹಳ ದಿನಗಳ ಕಾಲ ಸಂಗ್ರಹಿಸಿಕೊಳ್ಳಬಾರದು. ಕಾಲಕಾಲಕ್ಕೆ ಸ್ವಚ್ಛತೆ ಕಾಪಾಡಬೇಕು ಇದರಿಂದ ನೀರಿನಿಂದ ಹರಡುವ ರೋಗಗಳ ನಿಯಂತ್ರಣ ಮಾಡಬಹುದಾಗಿದೆ ಎಂದು ಸಲಹೆ ನೀಡಿದರು.
ಗ್ರಾಪಂ ಪಿಡಿಓ ಹಣಮಂತರಾಯ ಹೊಸಮನಿ, ಆರೋಗ್ಯ ನಿರೀಕ್ಷಣಾಧಿಕಾರಿ ಕಿರಣಕುಮಾರ ಧನವಡಕರ್, ಆರೋಗ್ಯಧಿಕಾರಿ ಭವ್ಯ ಸ್ನೇಹಲತಾ, ಆಶಾ ಕಾರ್ಯಕರ್ತೆ ಮರೆಮ್ಮ ಕೊಟಗಾರ ಸೇರಿದಂತೆ ಇನ್ನಿತರರು ಪಾಲ್ಗೋಂಡಿದ್ದರು.