ಜು. 7 ರಂದು ಜೈ ಜಗನ್ನಾಥ ರಥಯಾತ್ರೆ ಭಾಗವಹಿಸಲು ರಾಮಕೃಷ್ಣನ್ ಸಾಳೆ ಕರೆ
ಬೀದರ: ಜು.5:ಈ ತಿಂಗಳ 7ರಂದು ನಗರದ ರಾಂಪೂರೆ ಬಡಾವಣೆಯಲ್ಲಿರುವ ಶ್ರೀಲಕ್ಷ್ಮೀ ಸತ್ಯನಾರಾಯಣ ಮಂದಿರದಿಂದ ಅಂದು ಬೆಳಿಗ್ಗೆ 11-30ಕ್ಕೆ ಜಗನ್ನಾಥ ರಥಯಾತ್ರೆ ಹೊರಡಲಿದೆ ಎಂದು ಜೈ ಜಗನ್ನಾಥ ರಥೋತ್ಸವ ಮಹೋತ್ಸವದ ಅಧ್ಯಕ್ಷ ರಾಮಕೃಷ್ಣನ್ ಸಾಳೆ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಈ ರಥಯಾತ್ರೆ ಶ್ರೀ ಲಕ್ಷ್ಮೀ ಸತ್ಯನಾರಾಯಣ ಮಂದಿರದಿಂದ ಪ್ರಾರಂಭವಾಗಿ ನಗರದ ರಾಂಪೂರೆ ಬಡಾವಣೆ ಮಾರ್ಗವಾಗಿ, ಬಿ.ವಿ.ಭೂಮರೆಡ್ಡಿ ಮಹಾವಿದ್ಯಾಲಯದಿಂದ ಹಾದು ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಮಹಾವೀರ ಚೌಕ್, ಭಗತಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ ಜನವಾಡಾ ರಸ್ತೆ ಮಾರ್ಗವಾಗಿ ಚಿಕ್ಕಪೇಟ್ ಮೂಲಕ ರಿಂಗ್ ರಸ್ತೆ ಮೂಲಕ ಜಗನ್ನಾಥ ಮಂದಿರ ತಲುಪುವುದು. ರಥದ ಮುಂಭಾಗದಲ್ಲಿ ವಿಶೇಷವಾಗಿ ರಂಗೋಲಿ ಬಿಡಿಸುವ ಕಾರ್ಯಕ್ರಮ ಜರುಗುವುದು. ಪುಣೆಯ ಕಲಾವಿದರನ್ನು ಆಹ್ವಾನಿಸಿ ರಂಗೋಲಿ ಬಿಡಿಸಲಾಗುತ್ತಿದೆ. ಎಲ್ಲಾ ವೃತ್ತಗಳಲ್ಲಿ ನಗರದ ವ್ಯಾಪಾರಸ್ಥರು, ಭಕ್ತಾದಿಗಳು ಪಾನೀಯ ಮತ್ತು ಪ್ರಸಾದ ವಿತರಣೆ ಮಾಡುವರು. ಈ ಭವ್ಯ ರಥಯಾತ್ರೆಯಲ್ಲಿ ಜಗನ್ನಾಥ, ಬಲರಾಮ ಮತ್ತು ಸುಭದ್ರ ಅವರ ಒಳಗೊಂಡ ಮೂರ್ತಿಗಳ ಮೆರವಣಿಗೆ ಜರುಗುವುದು. ಈ ರಥವು ಹಿಂದೆ ಹೈದರಾಬಾದನಿಂದ ತರಿಸಲಾಗಿತ್ತು. ಆದರೆ ಈ ಬಾರಿ ಬೀದರನಲ್ಲಿಯೇ ರಥ ನಿರ್ಮಿಸಲಾಗಿದ್ದು, ಸಂಪೂರ್ಣ ಹೈಡ್ರೋಲಿಕ್ ಮಾದರಿಯಾಗಿದ್ದರಿಂದ ನಿಧಾನವಾಗಿ ಒಂದೇ ಸ್ಥರದಲ್ಲಿ ಚಲಿಸುವುದರಿಂದ ಇಲ್ಲಿಯ ಭಕ್ತರು ಜಗನ್ನಾಥನ ದರುಶನ ಮಾಡಿಕೊಳ್ಳಲಿಕ್ಕೆ ಸಾಧ್ಯವಾಗಲಿದೆ ಎಂದರು. ರಥಯಾತ್ರೆ ಬಳಿಕ ಜೈ ಜಗನ್ನಾಥ ಮಂದಿರದಲ್ಲಿ ಜಗನ್ನಾಥ ಪುರಾಣ, ಜಗನ್ನಾಥ ಕಥಾಲೀಲೆ ಮಾಲಿಕೆ, ಭಾರೂಡ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗುವವು. ಇದೇ ಸಂದರ್ಭದಲ್ಲಿ ಓರಿಸ್ಸಾ ಪುರಿ ಜಗನ್ನಾಥ ಮಂದಿರದಲ್ಲಿ ಜಗನ್ನಾಥ ರಥಯಾತ್ರೆ ನಡೆಯುತಿದ್ದು, ಅದರ ಅನುಕರಣೀಯವಾಗಿ ಈ ಭವ್ಯಯಾತ್ರೆ ಜರುಗಲಿದೆ. ಜಿಲ್ಲೆಯ ಹಾಗೂ ನೆರೆ ರಾಜ್ಯಗಳಾದ ಮಹಾರಾಷ್ಟ್ರ ಹಾಗೂ ತೆಲಂಗಾಣದ ಜಗನ್ನಾಥನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಾಳೆ ಕೋರಿದರು.
ಶ್ರೀಕೃಷ್ಣ ಚೈತನ್ಯ ಟ್ರಸ್ಟ್ ಅಧ್ಯಕ್ಷ ಡಾ. ನೀಲೆಶ ದೇಶಮುಖ ಮಾತನಾಡಿ ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಶ್ರೀ ಜಗನ್ನಾಥನನ್ನು ಅಶ್ವಾರೂಢ ವೇಷದಲ್ಲಿ ನೋಡಿದರೆ ಪುನರ್ಜನ್ಮ ಎಂಬುದು ಇರುವುದಿಲ್ಲ. ಜನನ ಮರಣದಿಂದ ಮುಕ್ತಿ ಹೊಂದುವರು. ಅವರಿಗೆ ಮೋಕ್ಷ ಪ್ರಾಪ್ತಿಯಾಗುವುದು ಎಂಬ ಪ್ರತೀತಿ ಇದೆ. ಹೀಗಾಗಿ ಸತ್ಯನಾರಾಯಣ ಮಂದಿರದಿಂದ ಪ್ರಾರಂಭವಾಗಿ ಜಗನ್ನಾಥ ಮಂದಿರವರೆಗೆ ಸಾಗುವ ಈ ರಥಯಾತ್ರೆಯಲ್ಲಿ ಅಶ್ವಾರೂಢನಾದ ಜಗನ್ನಾಥನನ್ನು ಜಿಲ್ಲೆಯ ಜನತೆ ಕಣ್ತುಂಬಾ ನೋಡಿ, ರಥ ಎಳೆದು ತಮ್ಮ ಜೀವನ ಪಾವನ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಮೆರವಣಿಗೆ ಸಮಿತಿ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಹಾಗೂ ಕಾರ್ಯಕ್ರಮದ ಉಸ್ತುವಾರಿ ವೀರಶೆಟ್ಟಿ ಮಣಗೆ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಶ್ರೀಕೃಷ್ಣ ಚೈತನ್ಯ ಟ್ರಸ್ಟ್ ಕಾರ್ಯದರ್ಶಿ ಶಿವರಾಮ ಜೋಶಿ ಹಾಗೂ ಕಾರ್ಯಕ್ರಮದ ಸಂಯೋಜಕರಾದ ರಾಜಕುಮಾರ ಅಳ್ಳೆ ಉಪಸ್ಥಿತರಿದ್ದರು.