ಭಕ್ತರ ಕಲ್ಯಾಣಕ್ಕಾಗಿ ಧಾರ್ಮಿಕ ಗುರುಗಳ ಧರ್ಮಾಚರಣೆ ಪ್ರಸ್ತುತ
ಆಳಂದ:ಜು.5: ಭಕ್ತರ ಕಲ್ಯಾಣಕ್ಕಾಗಿ, ಧರ್ಮೋದ್ದಾರಕ್ಕಾಗಿ, ಆಳಂದ ಶರಣ ಮಂಪಟದ ಚನ್ನಬಸವ ಪಟ್ಟದೇವರು ನಿರಂತವಾಗಿ ಧರ್ಮ ಕಾರ್ಯ ಹಾಗೂ ಮೌನಾನುμÁ್ಠನ ಭಕ್ತರಿಗಾಗಿ ಫಲ ಪ್ರಾಪ್ತ ಸಂಕಲ್ಪವನ್ನು ಈಡೇರಲಿ. ಭಕ್ತರ ಕಲ್ಯಾಣಕ್ಕಾಗಿ ಧಾರ್ಮಿಕ ಗುರುಗಳ ಧರ್ಮಾಚರಣೆ ಇಂದಿನ ಪ್ರಸ್ತುತೆಯಾಗಿದೆ ಎಂದು ಜಿಡಗಾ, ಮುಗಳಖೋಡ ಕೊಟನೂರ ಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಶುಭ ಹಾರೈಸಿದರು.
ಪಟ್ಟಣದ ಶರಣನಗರದ ಸದ್ಗುರು ರೇವಣಸಿದ್ಧ ಶಿವಶರಣರ ಮಠದ ಪೀಠಾಧಿಪತಿ ಚನ್ನಬಸವ ಪಟ್ಟದೇವರು ಕೈಗೊಂಡ 63 ದಿನಗಳ ಮೌನಾಷ್ಠಾನ ಮಹಾಮಂಗಲ ಸಮಾರಂಭದ ಸಾನ್ನಿಧ್ಯ ವಹಿಸಿ ಚನ್ನಬಸವ ಪಟ್ಟದೇವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಧರ್ಮದ ಮಾರ್ಗದಲ್ಲಿ ಧೈರ್ಯದಿಂದ ಸಾಗಬೇಕು. ಆಧ್ಯಾತ್ಮಿಕ ಜೀವನದಲ್ಲಿ ಶ್ರದ್ಧೆ, ಭಕ್ತಿ ಮತ್ತು ಸಹನೆಯ ಮಹತ್ವವನ್ನು ಅವರು ಒತ್ತು ಹೇಳಿದರು.
ಧರ್ಮ ಮತ್ತು ಆಧ್ಯಾತ್ಮದ ಮೂಲಕ ಸಮಾಜದಲ್ಲಿ ಶಾಂತಿ, ಪ್ರೀತಿ ಮತ್ತು ಬಾಂಧವ್ಯವನ್ನು ಪಸರಿಸಲು ನಾವೆಲ್ಲಾ ಪ್ರಯತ್ನಿಸಬೇಕು ಎಂದು ಅಭಿಪ್ರಾಯ ಪಟ್ಟರು.
ಮೌನಾಚರಣೆಯಿಂದ ಮನಸ್ಸಿಗೆ ಶಾಂತಿ, ಸ್ಪಷ್ಟತೆ ಮತ್ತು ಆಂತರಿಕ ಶಕ್ತಿಯನ್ನು ಗಳಿಸಲು ಸಾಧ್ಯವಾಗುತ್ತದೆ. ಧ್ಯಾನ ಮತ್ತು ಮೌನವು ಆಧ್ಯಾತ್ಮಿಕ ಅಭ್ಯಾಸದ ಅತ್ಯಂತ ಮುಖ್ಯ ಭಾಗವಾಗಿದೆ. ಎಲ್ಲರೂ ಒಟ್ಟಾಗಿ ಧರ್ಮದ ಹಾದಿಯಲ್ಲಿ ಸಾಗಿದಾಗ ಸಮಾಜದಲ್ಲಿ ಶಾಂತಿ ಮತ್ತು ಸಹನೆ ಬೆಳೆಸಬಹುದು. ನಮ್ಮ ಆಚಾರ-ವಿಚಾರಗಳಲ್ಲಿ ಪರಸ್ಪರ ಗೌರವ ಮತ್ತು ಸಹಾನುಭೂತಿ ಬೆಳೆಸಬೇಕು ಎಂದು ಹೇಳಿದರು.
ಯುವ ಜನಾಂಗ ನೈತಿಕತೆ, ಪ್ರಾಮಾಣಿಕತೆ ಮತ್ತು ಕರ್ತವ್ಯದ ಪ್ರತಿ ಬದ್ಧತೆ ನಮ್ಮ ಜೀವನದ ಭಾಗವಾಗಿ ಅನುಸರಿಸಬೇಕು. ಸಮಾಜ ಸೇವೆಯಲ್ಲೂ ತೊಡಗಿಸಿಕೊಳ್ಳಬೇಕು. ದೀನ ದುರ್ಬಲರ ಉದ್ಧಾರಕ್ಕಾಗಿ ಸೇವಾ ಕಾರ್ಯಗಳ ಜೊತೆಗೆ ಧರ್ಮ ಮತ್ತು ವಿಜ್ಞಾನ ಎರಡೂ ಸಮಾನವಾಗಿ ಮಹತ್ವದ್ದು. ಧರ್ಮ ಮನೋಬಲವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ, ವಿಜ್ಞಾನ ಜೀವನದ ಸುಧಾರಣೆಯನ್ನು ತರಿಸುತ್ತದೆ ಎಂದರು.
ಸಮ್ಮುಖ ವಹಿಸಿದ್ದ ಯಳಸಂಗಿ ಸಿದ್ಧಾರೂಢ ಮಠದ ಶ್ರೀ ಪರಮಾನಂದ ಮಹಾಸ್ವಾಮಿಗಳು ಮಾತನಾಡಿ, ಆತ್ಮಸಾಕ್ಷಾತ್ಕಾರಕ್ಕೆ ಪೂರಕ ಅನುಷ್ಠಾನ ಮನುಷ್ಯನ ಅಂತರಂಗದ ವಿಕಾಸಕ್ಕೆ ಅನುಷ್ಠಾನವು ಪೂರಕ ಮಾರ್ಗ, ಮೌನದಿಂದ ಮಾತ್ರ ಏಕಾಗ್ರತೆಯನ್ನು ಸಾಧಿಸಲು ಸಾಧ್ಯ, ಈ ನಿಟ್ಟಿನಲ್ಲಿ ಚನ್ನಬಸವ ಪಟ್ಟದೇವರ ಕಾರ್ಯವೂ ಭಕ್ತರಿಗೆ ಕಾಮಧೇನು ಕಲ್ಪವೃಕ್ಷವಾಗಿದ್ದು, ಭಕ್ತರು ತನು,ಮನ ಧನಗಳಿಂದ ಸೇವಾ ಭಾವದಿಂದ ಭಕ್ತಿಯಿಂದ ದುಡಿದು ಪುಣ್ಯವನ್ನು ಸಂಪಾಧಿಸಬೇಕು ಎಂದು ಹೇಳಿದರು.
ಆಳಂದ ಹಿರೇಮಠದ ಸಿದ್ಧೇಶ್ವರ ಶಿವಾಚಾರ್ಯರು, ಶ್ರೀ ಶಿವಶರಣ ಮಂಟಪ ಮಠದ ಪೀಠಾಧಿಪತಿ ಚನ್ನಬಸವ ಪಟ್ಟದೇವರು. ದೇವಂತಗಿ ರೇವಣಸಿದ್ಧ ಶಿವಾಚಾರ್ಯ ಪಟ್ಟದೇವರು, ಮೈಂದರ್ಗಿ ಅಭಿನವ ರೇವಣಸಿದ್ಧ ಪಟ್ಟದೇವರು, ಚಳಕಾಪೂರ ಶಂಕರಾನಂದ ಸ್ವಾಮಿಗಳು ಈ ಸಂದರ್ಭದಲ್ಲಿ ಮಾತನಾಡಿದರು.
ಭಕ್ತಾಧಿಗಳು ಚನ್ನಬಸವ ಪಟ್ಟದೇವರ ದರ್ಶನ ಪಡೆದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಕುಂಭ, ಕಳಸ ಮತ್ತು ವಾದ್ಯಗಳೊಂದಿಗೆ ಆನೆ ಮೇಲೆ ಮೆರವಣಿಗೆ ಸಾಗಿ ಮರಳಿ ಮಂಟಪಕ್ಕೆ ಬರಮಾಡಿಕೊಳ್ಳಲಾಯಿತು. ಸಮಾಜ ಮುಖಂಡರು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು ಪಾಲ್ಗೊಂಡಿದ್ದರು.