ಶಿವಜ್ಞಾನದಿಂದ ಬದುಕು ಮಂಗಳ : ಹಾರಕೂಡ ಶ್ರೀ
ಬೀದರ್:ಜು.5: ಶಿವಜ್ಞಾನದಿಂದ ಬದುಕು ಮಂಗಳವಾಗುತ್ತದೆ, ಸತ್ಯದ ಗೆರೆದಾಟದಂತೆ ಮಾನವೀಯ ಮೌಲ್ಯಗಳ ಚೌಕಟ್ಟಿನಲ್ಲಿ ಬದುಕಿದ್ದೆ ಆದರೆ, ಬದುಕಿನ ಮೌಲ್ಯಯುತ ಪರಿಮಳ ಸೂಸುತ್ತಿರುತ್ತದೆ ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಸೈದಾಪುರ ಗ್ರಾಮಸ್ಥರಿಂದ ಏರ್ಪಡಿಸಿದ ಭಕ್ತಿ ನಮನ ಹಾಗೂ 670ನೇ ತುಲಾಭಾರ ಸೇವೆ ಸಮಾರಂಭದ ಪಾವನ ಸನ್ನಿಧಾನ ವಹಿಸಿದ ಶ್ರೀಗಳು ನಮ್ಮ ಬಾಳ್ವೆಗೆ ಭೌತಿಕ ವಸ್ತುಗಳ ಅಗತ್ಯತೆ ಖಂಡಿತ ಇದೆ, ಆದರೆ ಕನಕ, ಕಾಂಚನ, ಕಾಮಿನಿಗಳೇ ನಮ್ಮ ಬದುಕಾಗಬಾರದು, ಯಾವುದಕ್ಕೂ ಅತಿಯಾಗಿ ಅಂಟಿಕೊಳ್ಳದೆ ಪರಶಿವನ ನೆಂಟಸ್ಥಿಕೆ ಸಾಧಿಸಿಕೊಳ್ಳಬೇಕು.
ಮೋಹದ ಮಾಯೆಯಲ್ಲಿ ಸಿಲುಕಿ ಪರಿತಪಿಸದೆ, ನಿರ್ಲಿಪ್ತ ಭಾವದಿಂದ ಬದುಕು ಸವೆಸಿ ಜೀವನ್ಮುಕ್ತಿ ಪಡೆಯುವಲ್ಲಿ ಸಫಲನಾಗಬೇಕು.
ನಮ್ಮಲ್ಲಿ ಇರುವ ವಿದ್ಯೆ, ಬುದ್ಧಿ, ಸಿರಿ, ಸಂಪದಗಳ ಕುರಿತು ಸದಭಿಮಾನ ಇರಬೇಕೆ ಹೊರತು ದುರಭಿಮಾನ ಅಲ್ಲ.
ವಿನಯ ಸಂಪನ್ನತೆಯಿಂದ ಕೂಡಿದ ನಡೆ, ನುಡಿ, ದಾನ, ಧರ್ಮದಿಂದ ನಾವಿದ್ದಲ್ಲಿಯೇ ಸ್ವರ್ಗ ಸಿರಿ ಕಾಣಬಹುದಾಗಿದೆ.
ಭಕ್ತಿ ಸಂಪನ್ನರಾದ ಸೈದಾಪುರ ಜನತೆಗೆ ಹಾರಕೂಡ ಚನ್ನಬಸವ ಶಿವಯೋಗಿಗಳ ಕೃಪೆ ಶ್ರೀರಕ್ಷೆಯಾಗಿ ಕಾಪಾಡುವಂತಾಗಲಿ ಎಂದು ಶುಭ ಹಾರೈಸಿದರು.
ದಗಡು ಬಿದರಾದಾರ ಸ್ವಾಗತಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಕಾಶಪ್ಪ ದೇಗಾಂವ, ವಿಜಯಕುಮಾರ ಸಂಗೋಳಗೆ, ವೆಂಕಟರಾವ ಪಾಟೀಲ, ಬಾಬು ಬೋಂಬಲೆ, ಶ್ರೀನಿವಾಸ ಖಾಪರೆ, ರಾಮಚಂದ್ರ ಬೊಂಬಲೆ ಮುಂತಾದವರು ಉಪಸ್ಥಿತರಿದ್ದರು.
ಅಂಬರಾಯ ಬೊಂಬಲೆ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
ಗೋವಿಂದ ಪಾಟೀಲ ವಂದಿಸಿದರು.
ಇದಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿದ ಹಾರಕೂಡ ಶ್ರೀಗಳಿಗೆ ಪುಷ್ಪದಿಂದ ಅಲಂಕೃತ ವಾಹನದ ಮೇಲೆ ಪಲ್ಲಕ್ಕಿ ಇಟ್ಟು ಪಲ್ಲಕ್ಕಿ ಉತ್ಸವ ಮಾಡಲಾಯಿತು.