ಮಕ್ಕಳ ಸೇವೆ ಮಾಡುವುದೇ ಒಂದು ಸೌಭಾಗ್ಯ: ಸಂಗಮೇಶ ಬಬಲೇಶ್ವರ
ವಿಜಯಪುರ,ಜು.5:ಮಕ್ಕಳು ದೇವರ ಸಮಾನರು. ಅವರ ಸೇವೆ ಮಾಡುವ ಸೌಭಾಗ್ಯ ದೊರೆತಿರುವ ಇಲ್ಲಿಯ ಸಿಬ್ಬಂದಿ ನಿಜಕ್ಕೂ ಭಾಗ್ಯವಂತರು ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ನೂತನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಗುರುವಾರ ನಗರದ ಜಿಲ್ಲಾ ಪಂಚಾಯತಿ ಬಳಿ ಇರುವ ಬಾಲಕರ ಬಾಲ ಮಂದಿರಕ್ಕೆ ಭೇಟಿ ನೀಡಿ ಆವರು ಮಾತನಾಡಿದರು.
ಮಕ್ಕಳ ಸೇವಾ ಭಾಗ್ಯ ಒಂದು ಸೌಭಾಗ್ಯವೆಂದು ತಿಳಿಯಿರಿ. ಮಕ್ಕಳ ಸೇವೆಯೇ ಭಗವಂತನ ಸೇವೆ. ಬಾಲಮಂದಿರದಲ್ಲಿರುವ ಮಕ್ಕಳಿಗೆ ನೀವೇ ತಂದೆ ತಾಯಿಯ ಪ್ರೀತಿಯನ್ನು ನೀಡಿ, ಪೆÇೀಷಿಸಿ, ಬೆಳೆಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಅಣಿಗೊಳಿಸಬೇಕು ಎಂದು ತಿಳಿಸಿದರು.
ಬಾಲ ಮಂದಿರ ಪರಿಶೀಲಿಸಿದ ಅವರು, ಅಲ್ಲಿರುವ ಹಲವಾರು ನ್ಯೂನ್ಯತೆಗಳನ್ನು ಪಟ್ಟಿ ಮಾಡಿ ಒಂದು ವಾರದಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸ್ವಚ್ಛತೆ, ಶುಚಿತ್ವ ಮತ್ತು ಗುಣಮಟ್ಟದ ಆಹಾರ ಒದಗಿಸದಿದ್ದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಬಾಲ ಮಂದಿರದಲ್ಲಿ ಸಸಿ ನೆಟ್ಟ ಅವರು, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅವರು ಕೋಟಿ ವೃಕ್ಷ ಅಭಿಯಾನದ ಮೂಲಕ ಜಿಲ್ಲೆಯಾದ್ಯಂತ ಲಕ್ಷಾಂತರ ಸಸಿಗಳನ್ನು ನೆಟ್ಟು ನಮ್ಮೆಲ್ಲರಿಗೂ ಪ್ರೇರಕ ಶಕ್ತಿಯಾಗಿದ್ದಾರೆ. ಬಾಲಕರ ಬಾಲಮಂದಿರದ ಆವರಣದಲ್ಲಿ ಸಾಕಷ್ಟು ಜಾಗ ಇರುವುದರಿಂದ ಕೋಟಿ ವೃಕ್ಷ ಅಭಿಯಾನ ಹಾಗೂ ಅರಣ್ಯ ಇಲಾಖೆಯ ಸಹಯೋಗದಿಂದ ಆವರಣದ ತುಂಬಾ ಸಸಿಗಳನ್ನು ನೆಟ್ಟು ಪೆÇೀಷಿಸಿ, ಪರಿಸರ ಉಳಿಸುವ ಪುಣ್ಯದ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು. ಬಾಲಮಂದಿರದ ಮಕ್ಕಳೊಂದಿಗೆ ಸಮಯ ಕಳೆದ ಅವರು, ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದಲು ಹಾಗೂ ಮಹಾಪುರುಷರ ಆದರ್ಶಗಳನ್ನು ಅಳವಡಿಸಿಕೊಂಡು ಶ್ರೇಷ್ಠ ನಾಗರಿಕರಾಗಿ ಭಾರತದ ಬೆಳಕಾಗಿ ಎಂದು ಮಕ್ಕಳಿಗೆ ಶುಭ ಹಾರೈಸಿದರು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷನಾದ ನಂತರ ನಾನು ಹಲವಾರು ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದೇನೆ. ನನ್ನ ಭೇಟಿಯ ವೇಳೆ ಮೊದಲ ಆದ್ಯತೆ ಬಾಲಮಂದಿರಗಳಿಗೆ ಇರುತ್ತದೆ. ಅಲ್ಲಿ ಇರುವ ಮಕ್ಕಳು ತಂದೆ ತಾಯಿ ಇಲ್ಲದವರು, ಸಿಂಗಲ್ ಪೇರೆಂಟ್ ಇರುವವರು ಹೀಗೆ ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಮಕ್ಕಳು ಬಾಲ ಮಂದಿರಗಳಲ್ಲಿ ಇರುವುದರಿಂದ ಅಂಥ ಮಕ್ಕಳ ಬದುಕು ಹಸನಾಗಿಸುವ ಕೆಲಸ ನಾವೆಲ್ಲರೂ ಮಾಡಬೇಕಾಗಿದೆ ಎಂದು ತಿಳಿಸಿದರು.
ಸರಕಾರ ಎಲ್ಲ ಸೌಲಭ್ಯಗಳನ್ನು ನೀಡಿದ್ದರೂ ಅದನ್ನು ಮಕ್ಕಳಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಕೆಲವು ಅಧಿಕಾರಿಗಳು ವಿಫಲರಾಗುತ್ತಿದ್ದಾರೆ. ಅಂಥವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಮಕ್ಕಳನ್ನು ಪ್ರೀತಿಪೂರ್ವಕವಾದ ಪರಿಸರದಲ್ಲಿ ಆರೋಗ್ಯ ಪೂರ್ಣವಾಗಿ ಸದೃಢ ನಾಗರಿಕರನ್ನಾಗಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೇರಿದಂತೆ ಬಾಲ ಮಂದಿರದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.