ಯಕ್ಕುಂಡಿ ಗ್ರಾಮದಲ್ಲಿ ಕಾಶಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ
ವಿಜಯಪುರ,ಜು.5:ಜಿಲ್ಲೆಯ ಬಬಲೇಶ್ವರ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ಶ್ರೀಮದ್ ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗತ್ಪಾದಂಗಳವರ ಅಡ್ಡ ಪಲ್ಲಕ್ಕಿ ಮಹೋತ್ಸವ ವೈಭವಯುತವಾಗಿ ನಡೆಯಿತು.
ಯಕ್ಕುಂಡಿ ಗ್ರಾಮದಲ್ಲಿ ಶ್ರೀ ಹನುಮಾನ ದೇವಸ್ಥಾನದ ಬದರಿನಾಥ ಶೈಲಿಯ ಶಿಖರದ ಕಳಸಾರೋಹನದ ವಿಶೇಷ ಕಾರ್ಯಕ್ರಮ ನಿಮಿತ್ತ ಪ್ರಮುಖ ಬೀದಿಗಳಲ್ಲಿ ಆರತಿ ಮತ್ತು ಕುಂಭ ಮೇಳದೊಂದಿಗೆ ಕಾಶೀ ಜಗದ್ಗುರುಗಳವರ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ಶಿಖರದ ಪಂಚ ಕಳಸ ಮೆರವಣಿಗೆ ಹಾಗೂ ಧರ್ಮಸಭೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಜಗದ್ಗುರುಗಳು ಗ್ರಾಮದಲ್ಲಿ ಜನರ ಭಕ್ತಿ, ಸಂಸ್ಕಾರದ ಹಿರಿಮೆ ಗರಿಮೆಯನ್ನು ಕುರಿತು ಆಶೀರ್ವಚನ ನೀಡುತ್ತಾ ಎಲ್ಲ ಭಕ್ತಿಗಳಲ್ಲಿ ಶ್ರವಣ ಭಕ್ತಿ ದೊಡ್ಡದು ಗ್ರಾಮಸ್ಥರು ಬಹಳ ಶ್ರದ್ಧೆಯಿಂದ ಕಾರ್ಯಕ್ರಮ ಯಶಸ್ವಿಗೊಳಿಸಿದ್ದೀರಿ. ಕೇಳಿದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಂಬಗಿ ಕೆಂಗಲಗುತ್ತಿ ಹಿರೇಮಠದ ಪೂಜ್ಯರು, ಮಮದಾಪೂರ ವಿರಕ್ತಮಠದ ಪೂಜ್ಯರು, ಗುಳೇದಗುಡ್ಡದ ಅಮರೇಶ್ವರ ಮಠದ ಪೂಜ್ಯರು, ಬೀಳಗಿ ಕಲ್ಮಠದ ಪೂಜ್ಯರು ಉಪಸ್ಥಿತರಿದ್ದು, ಎಲ್ಲಾ ಪೂಜ್ಯರು ಯಕ್ಕುಂಡಿ ಗ್ರಾಮದ ಸದ್ಭಕ್ತರು ತೋರಿದ ಭಕ್ತಿಯಿಂದ ಒಂಬತ್ತು ದಿನ ಕೇಳಿದ ಪ್ರವಚನ, ಧ್ಯಾನದ ಜೊತೆಗೆ ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ಕುರಿತು ಮಾತನಾಡಿದರು.
ಬಸಯ್ಯ ಹಿರೇಮಠ ಸ್ವಾಗತಿಸಿದರು. ಗುಣದಾಳ ಕಲ್ಯಾಣ ಹಿರೇಮಠದ ಡಾ. ವಿವೇಕಾನಂದ ದೇವರು ನಿರೂಪಿಸಿ, ವಂದಿಸಿದರು. ಅರ್ಚಕÀ ರಂಗಪ್ಪ ಪೂಜಾರಿ ಹಾಗೂ ಸುತ್ತಲಿನ ಗ್ರಾಮದ ಭಕ್ತ ಸಮೂಹ ಉಪಸ್ಥಿತರಿದ್ದರು.