ನಟ ಪುನೀತ್ ಹೆಸರಿನಲ್ಲಿ ಹೃದಯ ಜ್ಯೋತಿ ಯೋಜನೆ
ಮೈಸೂರು, ಜೂ.೫ -ದಿವಂಗತ ನಟ ಡಾ.ಪುನೀತ್ ರಾಜ್ ಕುಮಾರ್ ಅಭಿನಯ ಮಾತ್ರವಲ್ಲದೆ ಯಾರಿಗೂ ಗೊತ್ತಾಗದಂತೆ ಮಾಡಿದ ಸಮಾಜ ಸೇವೆಯು ಅಪಾರ. ಹೀಗಾಗಿ ಅವರ ಹೆಸರಿನಲ್ಲಿ ಆರೋಗ್ಯ ಇಲಾಖೆಯಲ್ಲಿ ಸರ್ಕಾರ ಜಾರಿಗೊಳಿಸಿರುವ ಮಹತ್ವದ ಯೋಜನೆ ಎಚ್.ಡಿ.ಕೋಟೆ ತಾಲೂಕಿನಲ್ಲಿ ಜನಪ್ರಿಯಗೊಳ್ಳುತ್ತಿದೆ. ಕರ್ನಾಟಕ ಸರ್ಕಾರ ಡಾ.ಪುನೀತ್ ರಾಜ್‌ಕುಮಾರ್ ಹೃದಯಜ್ಯೋತಿ ಯೋಜನೆ ಜಾರಿಗೊಳಿಸುವ ಮೂಲಕ ಹೃದಯಾಘಾತದಿಂದ ಸಾವಿನ ಪ್ರಮಾಣವನ್ನು ತಡೆಗಟ್ಟಲು ಕ್ರಮ ಕೈಗೊಂಡಿದೆ.
೪೦ ಸಾವಿರ ಮೌಲ್ಯದ ಇಂಜೆಕ್ಷನ್!
ವ್ಯಕ್ತಿಗೆ ಹೃದಯಾಘಾತದ ಲಕ್ಷಣಗಳು ಕಂಡುಬಂದರೆ, ತಕ್ಷಣವೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಮತ್ತು ಇಸಿಜಿ ಪರೀಕ್ಷೆಯಲ್ಲಿ ವ್ಯತ್ಯಾಸ ಕಂಡುಬಂದರೆ, ವೈದ್ಯರು ಸುಮಾರು ೩೬ ಸಾವಿರದಿಂದ ೪೦ ಸಾವಿರ ವೆಚ್ಚದ ಈ ಚುಚ್ಚುಮದ್ದನ್ನು ನೀಡುತ್ತಾರೆ. ಈ ಚುಚ್ಚುಮದ್ದು ಹೃದಯಾಘಾತವನ್ನು ೧೨೦ ನಿಮಿಷಗಳವರೆಗೆ (೨ ಗಂಟೆಗಳ) ತಡೆಯುತ್ತದೆ.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಹೃದ್ರೋಗ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ತಪಾಸಣೆ ಮಾಡಿಸಿ ಮುಂದಿನ ಹಂತದ ಚಿಕಿತ್ಸೆ ನೀಡಲಾಗುವುದು ಎಂದು ಎಚ್.ಡಿ.ಕೋಟೆ ಪಟ್ಟಣದ ಸರಕಾರಿ ಆಸ್ಪತ್ರೆಯ ತಜ್ಞ ವೈದ್ಯಾಧಿಕಾರಿ ಡಾ.ಪ್ರಜ್ವಲ್ ಕುಮಾರ್ ತಿಳಿಸಿದ್ದಾರೆ.
ಉಚಿತ ಚುಚ್ಚುಮದ್ದು
ಈ ಯೋಜನೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಜಾರಿಗೊಳಿಸಲಾಗಿದೆ ಮತ್ತು ಈ ಚುಚ್ಚುಮದ್ದು ಖಾಸಗಿ ಆಸ್ಪತ್ರೆಗಳು ಸೇರಿದಂತೆ ಬೇರೆಡೆ ಲಭ್ಯವಿಲ್ಲ. ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಈ ಯೋಜನೆಯಡಿ ಕಳೆದ ಒಂದು ತಿಂಗಳಿನಿಂದ ೩ ಚುಚ್ಚುಮದ್ದು ನೀಡಲಾಗಿದೆ. ಹೃದಯಾಘಾತದಿಂದ ಬಳಲುತ್ತಿರುವ ಜನರು ಈ ಚುಚ್ಚುಮದ್ದು ಮತ್ತು ಹೆಚ್ಚಿನ ಚಿಕಿತ್ಸೆಯನ್ನು ಪಡೆದ ನಂತರ ಯಾವುದೇ ತೊಂದರೆಗಳನ್ನು ಅನುಭವಿಸುವುದಿಲ್ಲ .
ಈ ಯೋಜನೆಯು ಎಲ್ಲಾ ವರ್ಗಗಳಿಗೆ ಲಭ್ಯವಾಗಿದೆ ಮತ್ತು ಹೆಚ್ಚಿನ ಅಗತ್ಯವಿದ್ದಲ್ಲಿ, ಡಾ.ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಚುಚ್ಚುಮದ್ದು ಪಡೆಯುವ ಮೂಲಕ ಸಾವಿನಿಂದ ರಕ್ಷಿಸಬಹುದು.