ಭ್ರಷ್ಟಾಚಾರದಲ್ಲಿ ಶಾಮೀಲಾದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವರದಯ್ಯ ಸ್ವಾಮಿ ಆಗ್ರಹ
ಬೀದರ: ಜು.5:2018 ರಿಂದ 1-2-2022ರ ವರೆಗೆ ಸತತ ನಾಲ್ಕು ವರ್ಷಗಳ ಕಾಲ ತಾಲೂಕಿನ ಗಾದಗಿ ಗ್ರಾಮ ಪಂಚಾಯತನಲ್ಲಿ ಸುಮಾರು 8 ಕೋಟಿಗೂ ಅಧಿಕ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಶಾಮೀಲಾಗಿರುವ ಅಂದಿನ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀಧರ ಹಾಗೂ ಗ್ರಾ.ಪಂ. ಹಾಲಿ ಸದಸ್ಯ ಸಂತೋಷ ರಾಮಶೆಟ್ಟಿ ಮಾಮನಕೇರಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸ್ಥಳೀಯ ಸಾಮಾಜಿಕ ಹೋರಾಟಗಾರ ವರದಯ್ಯ ಸ್ವಾಮಿ ಆಗ್ರಹಿಸಿದ್ದಾರೆ.
ಗುರುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು ಕರವಸೂಲಿ ಹಣ, ಈ ಸ್ವತ್ತು ಹಣ, ನಿವೇಶನದ ನೊಂದಣಿ ಶುಲ್ಕ ಸೇರಿದಂತೆ ಗ್ರಾಮ ಪಂಚಾಯತ್‍ಗೆ ಬರುವ ಎಲ್ಲಾ ಆದಾಯದ ಮೂಲ ಹಣ ಸೇರಿ ಸುಮಾರು 3 ಕೋಟಿಗೂ ಅಧಿಕ ಹಣವನ್ನು ಗ್ರಾಮ ಪಂಚಾಯತ್‍ಗೆ ಕಟ್ಟದೇ ಗುಳುಂ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಅಣವೀರ ಕೂಡಂಬಲ ಲೇಔಟ್‍ನ 1621.5 ಚದುರ ಅಡಿ ಅಳತೆಯುಳ್ಳ ಲೇಔಟ್‍ನಲ್ಲಿ ಸುಮಾರು 15 ನಿವೇಶನಗಳು ತಲಾ ನಾಲ್ಕು ಲಕ್ಷಕ್ಕೆ ಮಾರಾಟ ಮಾಡುವ ಮೂಲಕ ಗ್ರಾಮ ಪಂಚಾಯತ್ ಬೊಕ್ಕಸಕ್ಕೆ ಹಾನಿಯುಂಟು ಮಾಡಿರುತ್ತಾರೆ. ಕಂಟೆಪ್ಪ ಲೇಔಟ್‍ನ ತೆರಿಗೆ ಹಣ ಕೂಡಾ ತುಂಬದೆ ವಂಚನೆ ಮಾಡಲಾಗಿದೆ. ಇಲ್ಲಿಯವರೆಗೆ ಸುಮಾರು 10 ಸಾವಿರ ಡಿಜಿಟಲ್ ಖಾತಾ ನೀಡಲಾಗಿದೆ. ಆದರೆ ಸರಿಯಾದ ಲೆಕ್ಕಪತ್ರವಿಲ್ಲ. ಗಾದಗಿ ಗ್ರಾಮ ಪಂಚಾಯತ್‍ನ ಈ ಸ್ವತ್ತು ಬಯೋಮೆಟ್ರಿಕ್ ಥಂಬ್ ಹೊಂದಿರುವ ಅಧಿಕಾರಿಗಳ ದ್ವಿತೀಯ ದರ್ಜೆ ಸಹಾಯಕ, ಕಾರ್ಯದರ್ಶಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಯೋಮೆಟ್ರಿಕ್ ಥಂಬ್‍ನ ವರದಿಯನ್ನು ಪಡೆಯಲು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಬೀದರ ಇವರು ಪತ್ರ ಬರೆದಿದ್ದು ಅದರಂತೆ ನಿರ್ದೇಶಕರು ಈ ಗವರ್ನೆನ್ಸ್ ಆರ್‍ಡಿಪಿಆರ್ ಇಲಾಖೆ ಬೆಂಗಳೂರು ಇವರು ವರದಿಯನ್ನು ಜಿಲ್ಲಾ ಪಂಚಾಯತ್‍ಗೆ ನೀಡಿರುತ್ತಾರೆ. ಅದರಲ್ಲಿಯ ಮೊಬೈಲ್ ಸಂಖ್ಯೆ 8762636756 ಇದೆ. ಈ ಮೊಬೈಲ್ ಸಂಖ್ಯೆ ಯಾರದು ಎಂದು ತನಿಖೆ ನಡೆಸಿ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಅಲ್ಲದೇ ಸಂತೋಷ ಮಾಮನಕೇರಿ ಹಾಗೂ ಅವರ ಪತ್ನಿ ಒಂದು ಶೌಚಾಲಯ ನಿರ್ಮಿಸಿ ಎರಡು ಶೌಚಾಲಯದ ಹಣ ಪಂಚಾಯತ್‍ನಿಂದ ಪಡೆದಿದ್ದಾರೆ ಎಂದರು.
ಹಲವು ಸಿಎ ನಿವೇಶನ ಮಾರಾಟದ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯನಾಗಿ ಸಂತೋಷ ರಾಮಶೆಟ್ಟಿ ಮಾಮನಕೇರಿ ತಮ್ಮ ಸಹಿ ಮಾಡಿದ್ದಾರೆ. ಭ್ರಷ್ಟಾಚಾರ ಕುರಿತು ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದೇನೆ. ಆದರೆ ಇದುವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದರು. ಭ್ರಷ್ಟಾಚಾರದ ಕುರಿತು ಪ್ರಶ್ನೆ ಮಾಡಿದರೆ ಕೆಲವರು ನನ್ನ ಮೇಲೆ ಹಲ್ಲೆ ಮಾಡಲು ಪ್ರಯತ್ನ ಮಾಡಿದ್ದಾರೆ. ಈ ಕುರಿತು 1-12-2023 ರಂದು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರ ನೀಡಿ ರಕ್ಷಣೆಗಾಗಿ ಕೋರಿದ್ದೇನೆ. ಹೀಗಾಗಿ ಗ್ರಾಮ ಪಂಚಾಯತ್‍ನಲ್ಲಿ ಅವ್ಯವಹಾರ ನಡೆಸಿರುವ ಸಂತೋಷ ರಾಮಶೆಟ್ಟಿ ಮಾಮನಕೇರಿ ಹಾಗೂ ಅಂದಿನ ಪಿಡಿಓ ಶ್ರೀಧರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ. ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯಕ್ಕೆ ಹೋಗಿ ಕಾನೂನು ಹೋರಾಟ ಮುಂದುವರೆಸುವೆ ಎಂದು ಎಚ್ಚರಿಸಿದ್ದಾರೆ.