ಹಬೋಹಳ್ಳಿ : ಗದ್ದಿಕೇರಿ ಗ್ರಾಮದಲ್ಲಿ ಸೆರೆ ಸಿಕ್ಕ ಕರಡಿ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜು.05 ತಾಲೂಕಿನ ಗದ್ದಿಕೇರಿ ಗ್ರಾಮದಲ್ಲಿ ಮರವೇರಿ ಕುಳಿತಿದ್ದ ಕರಡಿಯನ್ನು ಗುರುವಾರ ಅರಣ್ಯಾಧಿಕಾರಿಗಳು  ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
 ಗ್ರಾಮದ ಚಲವಾದಿ ಓಣಿಯಲ್ಲಿ ಬೆಳಗ್ಗೆ 6 ಗಂಟೆಗೆ ಪ್ರತ್ಯಕ್ಷವಾದ ಕರಡಿಯನ್ನು ನೋಡಿ ಜನರು ಆತಂಕದಿಂದ ಭಯಭೀತರಾಗಿದ್ದರು. ಜನರು ಕೂಗಾಡಿ ಗಲಾಟೆ ಮಾಡಿದ್ದರಿಂದ  ಕರಡಿ ಹತ್ತಿರದ ಮರವೇರಿ ಕುಳಿತಿದೆ. ತಕ್ಷಣ ವಿಷಯವನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಹಾಗೂ ಸಿಬ್ಬಂದಿ  ಕಾರ್ಯಾಚರಣೆ ಶುರು ಮಾಡುವ ಮೂಲಕ ಕರಡಿಗೆ ಅರವಳಿಕೆ ಔಷಧಿ ನೀಡಿ ಪ್ರಜ್ಞೆ ತಪ್ಪಿಸಿ ಬಳಿಕ ಕೆಳಗಿಳಿಸಿ ಕರಡಿಯ ಕುತ್ತಿಗೆಗೆ ಗಾಯವಾಗಿದ್ದಕ್ಕೆ ಚಿಕಿತ್ಸೆ ನೀಡಿದರು. ಅರಣ್ಯಾಧಿಕಾರಿ ಕರಿಬಸಪ್ಪ ಮಾತನಾಡಿ ಇಲಾಖೆಯ ಮೇಲಾಧಿಕಾರಿಗಳಿಗೆ  ತಿಳಿಸಿ ಕರಡಿಯನ್ನು ಕರಡಿದಾಮವಾದ ದರೋಜಿಕೆರೆಗೆ ಬಿಡಲಾಗುವುದು ಎಂದು ತಿಳಿಸಿದರು.
 ಈ ಸಂದರ್ಭದಲ್ಲಿ ಹಡಗಲಿ ವಲಯ ಅರಣ್ಯಾಧಿಕಾರಿ ರೇಣುಕಾ, ಉಪ ವಲಯ ಅರಣ್ಯ ಅಧಿಕಾರಿ ತಿರುಮಲೇಶ್, ವೈದ್ಯಧಿಕಾರಿ ವಾಣಿ ಅರಣ್ಯ ರಕ್ಷಕರಾದ ರಾಜೇಂದ್ರ ಕುಮಾರ್ ಮಂಜುನಾಥ್ ಸಾಗರ್ ಶ್ರೀಕಾಂತ್ ರಾಮು ವೀಕ್ಷಕರಾದ ನಾಗರಾಜ್ ಮಂಜುನಾಥ್ ಮಲ್ಲಿಕಾರ್ಜುನ ಇದ್ದರು