ಬಳ್ಳಾರಿ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷರಾಗಿ ಶ್ರೀನಿವಾಸುಲು ಮಿಂಚು ಪದಗ್ರಹಣ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.05: ಜಿಲ್ಲಾ  ಲಾರಿ ಮಾಲೀಕರ ಸಂಘದ ನೂತನ ಅಧ್ಯಕ್ಷರಾಗಿ ಪಾಲಿಕೆ ಸದಸ್ಯ, ಶ್ರೀನಿವಾಸುಲು ಮಿಂಚು,  ಮತ್ತೊಬ್ಬ ಪಾಲಿಕೆ ಸದಸ್ಯ ನೂರ್ ಮಹಮ್ಮದ್ ಉಪಾಧ್ಯಕ್ಷರಾಗಿ ಇಂದು ಬೆಳಿಗ್ಗೆ ಸಂಘದ ಕಚೇರಿಯಲ್ಲಿ ಪದಗ್ರಹಣ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಶ್ರೀನಿವಾಸುಲು ಮಿಂಚು, ನಾನು ಹೆಸರಿಗೆ ಮಾತ್ರ ಅಧ್ಯಕ್ಷ,  ನಾನು ನಿಮ್ಮ  ಸೇವಕನಾಗಿ ಕೆಲಸ ಮಾಡುವೆ.
ನಮ್ಮಲ್ಲಿ ಯಾವುದೇ ಬಣ ಇಲ್ಲ,  ಗುಂಪುಗಾರಿಕೆಯನ್ನು  ಬೆಂಬಲಿಸುವುದಿಲ್ಲ, ನಾವೆಲ್ಲ ಒಂದಾಗಿ ಸಂಘವನ್ನು ಬಲಪಡಿಸೋಣ. ನಮ್ಮ ಹಿರಿಯ ನಾಯಕರು ನೀಡಿದ ಸೂಚನೆ ಮೇರೆಗೆ ಲಾರಿ ಮಾಲೀಕರು, ಚಾಲಕರು, ಕ್ಲೀನರುಗಳಿಗೆ ಬಾತ್ ರೂಮ್ ಹಾಗೂ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳುವೆ. ಸಾಗಾಣಿಕೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳ ನಿವಾರಣೆಗೆ ಶ್ರಮಿಸುವೆ ಎಂದು ಹೇಳಿದರು.
ಉಪಾಧ್ಯಕ್ಷ ನೂರ್ ಮೊಹಮ್ಮದ್ ಮಾತನಾಡಿ,  ಇಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಿದೆ.
ಜಿಲ್ಲೆಯಲ್ಲಿ ಬಾಡಿಗೆಗಳು ಮೊದಲು ಬಳ್ಳಾರಿ ಲಾರೀ‌ ಮಾಲೀಕರಿಗೆ ಸಿಗಬೇಕು, ನಮ್ಮ ಹೊಟ್ಟೆ ತುಂಬಿದ ಮೇಲೆ ಪರರಿಗೆ ಅವಕಾಶ ನೀಡುವಂತಾಗಬೇಕು, ಆಂಧ್ರದಿಂದ ಬಂದು ಯಾರಾದರೂ ಇಲ್ಲಿ ದೌರ್ಜನ್ಯ ಮಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಮಾಜಿ ಅಧ್ಯಕ್ಷ ಪೆದ್ದನ್ನ, ಪ್ರಧಾನ ಕಾರ್ಯದರ್ಶಿ ಮೆಹಬೂಬಸಾಬ್, ಪಾಲಿಕೆ ಸದಸ್ಯ ಎಂ.ಪ್ರಭಂಜನಕುಮಾರ್, ಕಾಂಗ್ರೆಸ್ ಮುಖಂಡ ಬಿಆರ್ ಎಲ್ ಸೀನಾ, ಬಸವರಾಜ ಮತ್ತಿತರರು ಇದ್ದರು.