ಮುಂಜಾಗ್ರತಾ ಸಮನ್ವಯ ಸಮಿತಿ ಸಭೆ
ಲಕ್ಷ್ಮೇಶ್ವರ,ಜು5: ಪಟ್ಟಣದ ಪುರಸಭೆಯ ಸಭಾಭವನದಲ್ಲಿ ಸಾಂಕ್ರಾಮಿಕ ರೋಗಗಳ ತಡೆಗಟ್ಟುವ ಮುಂಜಾಗ್ರತಾ ಸಮನ್ವಯ ಸಮಿತಿ ಸಭೆಯು ತಹಶೀಲ್ದಾರ್ ವಾಸುದೇವ್ ವಿ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ತಾಲೂಕ ವೈದ್ಯಾಧಿಕಾರಿ ಸುಭಾಷ್ ದಾಯಗೊಂಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸದ್ಯ ಡೆಂಗಿ ಜ್ವರ ವೈರಸ್ ನಿಂದ ಉಂಟಾಗುವ ಕಾಯಿಲೆಯಾಗಿದ್ದು ಈಡಿಸ್ ಈಜಿಪ್ಟ್ ರೈ ಎಂಬ ಸೊಳ್ಳೆಯ ಕಡಿತದಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಮನೆ ಮಾಡುತ್ತವೆ. ಆದ್ದರಿಂದ ಜನಸಾಮಾನ್ಯರು ಸ್ವಚ್ಛ ನೀರನ್ನು ಬಾಯಿ ತೆರೆದು ಇಡದೆ ಅವುಗಳನ್ನು ಮುಚ್ಚಿ ಅನಾಹುತ ತಪ್ಪಿಸಬೇಕು ಎಂದರು.
ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ರೋಗಗಳು ಬರುವ ಮೊದಲೇ ಅವುಗಳನ್ನು ತಡೆಗಟ್ಟುವುದು ಮಹತ್ವದ ಕೆಲಸ ಎಂದರು ಪರಿಸರದ ಬದಲಾವಣೆಯಲ್ಲಿ ರೋಗಗಳು ಪ್ರಮುಖವಾಗಿ ನೀರು ಆಹಾರ ಮತ್ತು ಗಾಳಿಯ ಮೂಲಕ ಬರುತ್ತಿದ್ದು ಜನಸಾಮಾನ್ಯರು ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ವಹಿಸಬೇಕು ಡೆಂಗಿ ಜ್ವರದ ಲಕ್ಷಣಗಳಾದ ಜ್ವರ ವಿಪರೀತ ತಲೆನೋವು ಬಾಯಿ ಮೂಗು ಮತ್ತು ವಸಡುಗಳಿಂದ ರಕ್ತಸ್ರಾವ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತಹಸಿಲ್ದಾರ್ ವಾಸುದೇವ್ ವಿ ಸ್ವಾಮಿಯವರು ಈಗ ರಾಜ್ಯದಲ್ಲಿ ಡೆಂಗಿ ಉಲ್ಬಣಗೊಂಡಿದ್ದು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅದರಲ್ಲೂ ವಿಶೇಷವಾಗಿ ಪುರಸಭೆಯವರು ಈ ನಿಟ್ಟಿನಲ್ಲಿ ಜಾಗೃತಿ ವಹಿಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ಪುರಸಭೆ ಮುಖ್ಯ ಅಧಿಕಾರಿ ಮಹೇಶ್ ಹಡಪದ ಸದಸ್ಯರಾದ ಜಯಕ್ಕ ಅಂದಲಗಿ ರಾಮು ಗಡದವರ ಪುರಸಭೆಯ ಸಿಬ್ಬಂದಿ ಇದ್ದರು ಹನುಮಂತ ನಂದಣ್ಣನವರ ಕಾರ್ಯಕ್ರಮ ನಿರ್ವಹಿಸಿದರು.