ಆದಿಲ್ ಸಾವು ಉನ್ನತ ತನಿಕೆಗೆ ಆಗ್ರಹ
ಬೆಂಗಳೂರು, ಜು.೫- ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸರ ವಶದಲ್ಲಿದ್ದ ಆದಿಲ್ ಸಾವು ಪ್ರಕರಣದಲ್ಲಿ ಅನೇಕ ಅನುಮಾನಗಳಿದ್ದು, ಈ ಬಗ್ಗೆ ದಾವಣಗೆರೆಯಲ್ಲಿರುವ ಐಜಿಪಿ ಅಥವಾ ಮ್ಯಾಜಿಸ್ಟ್ರೇಟ್ ಮೂಲಕ ಉನ್ನತಮಟ್ಟದ ತನಿಖೆ ನಡೆಸಲು ಸರಕಾರ ಆದೇಶ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸೈಯದ್ ಅಶ್ರಫ್ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆದಿಲ್ ವಿರುದ್ಧ ಯಾವುದೆ ದೂರು ದಾಖಲಾಗಿರಲಿಲ್ಲ ಎಂದು ಸ್ವತಃ ಮುಖ್ಯಮಂತ್ರಿಯೆ ಹೇಳಿದ್ದಾರೆ. ಆದಿಲ್ ಸಾವಿಗೆ ರಕ್ತದೊತ್ತಡ, ಹೃದಯಾಘಾತ ಅಥವಾ ಮೂರ್ಛೆ ರೋಗ ಕಾರಣವೇ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.
ಈ ಕುರಿತು ಮುಖ್ಯಮಂತ್ರಿ, ಗೃಹ ಸಚಿವರು, ಚನ್ನಗಿರಿ ಠಾಣೆಯ ಪೊಲೀಸರು, ಆತನನ್ನು ಪರೀಕ್ಷೆ ಮಾಡಿದ ವೈದ್ಯರು ನೀಡಿರುವ ಹೇಳಿಕೆಗಳು ವ್ಯತಿರಿಕ್ತವಾಗಿವೆ ಎಂದು ಹೇಳಿದರು.
ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳಿಕೆಗಳನ್ನು ನೀಡಿರುವುದು ನೋಡಿದರೆ ಈ ಪ್ರಕರಣ ಮುಚ್ಚಿ ಹಾಕಲು ವ್ಯವಸ್ಥಿತ ಪ್ರಯತ್ನ ಏನಾದರೂ ನಡೆಯುತ್ತಿದೆಯೇ? ಕೇವಲ ಡಿವೈಎಸ್ಪಿ, ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಪಿಎಸ್ಸೈ ಅನ್ನು ಅಮಾನತ್ತು ಮಾಡಿದರೆ ಸಾಲದು, ಮೊದಲು ಕಾನೂನು ರೀತಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಬೇಕು ಎಂದು ಅವರು ಆಗ್ರಹಿಸಿದರು.
ಅಲ್ಪಸಂಖ್ಯಾತರ ಆಯೋಗ, ಅಲ್ಪಸಂಖ್ಯಾತ ಸಮುದಾಯದ ಸಚಿವರು ಏನು ಮಾಡುತ್ತಿದ್ದಾರೆ? ಈವರೆಗೆ ಅವರು ಚನ್ನಗಿರಿಗೆ ಯಾಕೆ ಭೇಟಿ ನೀಡಲಿಲ್ಲ? ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು ಆದಷ್ಟು ಬೇಗ ಚನ್ನಗಿರಿಗೆ ಹೋಗಿ, ಪರಿಸ್ಥಿತಿ ಅವಲೋಕನ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಸೈಯದ್ ಅಶ್ರಫ್ ಹೇಳಿದರು.
ಆದಿಲ್ ಪತ್ನಿಗೆ ಉದ್ಯೋಗ ಕೊಡಿಸಲು ಪ್ರಯತ್ನ ಮಾಡಬೇಕು. ಅಲ್ಲದೆ, ಸರಕಾರದಿಂದ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಿಸಬೇಕು. ಶೀಘ್ರವೇ ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ಮುಹಮ್ಮದ್ ಉಬೇದುಲ್ಲಾ ಶರೀಫ್ ಮಾತನಾಡಿ, ಆದಿಲ್ ಸಾವಿನ ಸುದ್ದಿ ಹೊರ ಬೀಳುತ್ತಿದ್ದಂತೆ ಅಲ್ಲಿನ ಸ್ಥಳೀಯ ನಾಯಕರು ಈ ಬಗ್ಗೆ ವಿಚಾರಿಸಲು ಚನ್ನಗಿರಿ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಆಗ, ಕೆಲವು ಯುವಕರು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಈ ಸಂಬಂಧ ೫೦ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು ಎಂದರು.
ಈ ಪೈಕಿ ಅಮಾಯಕರು ಇದ್ದಾರೆ. ಇನ್ನೂ ಹಲವರನ್ನು ಶರಣಾಗತಿಯಾಗುವಂತೆ ಪೊಲೀಸರು ನೋಟಿಸ್ ನೀಡುತ್ತಿದ್ದಾರೆ. ಈ ಬಂಧನದ ಪ್ರಕ್ರಿಯೆಯನ್ನು ನಿಲ್ಲಿಸುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು.
ಆದಿಲ್ ಮಟ್ಕಾ ಚೀಟಿ ಬರೆಯುತ್ತಿದ್ದ ಎಂದು ಆರೋಪಿಸಲಾಗುತ್ತಿದೆ. ಆದರೆ, ಮಟ್ಕಾ ದಂಧೆಯನ್ನು ಯಾರು ನಡೆಸುತ್ತಿದ್ದರೂ ಎಂಬುದು ಈವರೆಗೆ ಬಹಿರಂಗವಾಗಿಲ್ಲ ಎಂದು ಉಬೇದುಲ್ಲಾ ಶರೀಫ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಹಬೀಬುಲ್ಲಾ ಉಪಸ್ಥಿತರಿದ್ದರು.