ಕರಾಟೆಯಿಂದ ಶಿಸ್ತುಬದ್ಧ ಜೀವನ ಸಾಧ್ಯ
ಬಾಗೇಪಲ್ಲಿ,ಜು.೫- ಕರಾಟೆಯಿಂದ ಏಕಾಗ್ರತೆ, ಶಿಸ್ತುಬದ್ಧ ಜೀವನ ಸಾಧ್ಯವಾಗುತ್ತದೆ ಎಂದು ಜ್ಞಾನದೀಪ್ತಿ ಶಾಲೆಯ ಮುಖ್ಯಸ್ಥ ಕೆ.ಟಿ. ವೀರಾಂಜನೇಯ ತಿಳಿಸಿದರು.
ಪಟ್ಟಣದ ಗೂಳೂರು ಸರ್ಕಲ್ ನಲ್ಲಿರುವ ಜ್ಞಾನದೀಪ್ತಿ ಶಾಲಾವರಣದಲ್ಲಿ ಕರಾಟೆ ವಿದ್ಯಾರ್ಥಿಗಳಿಗೆ ಕರಾಟೆ ಬೆಲ್ಟ್ ಮತ್ತು ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದ ಅವರು ನಮ್ಮ ರಕ್ಷಣೆ ನಮ್ಮಿಂದಲೇ ಆಗಬೇಕು. ಹೀಗಾಗಿ ಕರಾಟೆ ಕಲಿತು ಆತ್ಮ ಮತ್ತು ಮಾನ ರಕ್ಷಣೆ ಕಲೆ ಕರಗತ ಮಾಡಿಕೊಳ್ಳಬೇಕು.
ಮಹಿಳೆಯರು ತಮ್ಮ ಮಾನ, ಪ್ರಾಣ ರಕ್ಷ ಣೆಗಾಗಿ ಕರಾಟೆ ಕಲಿಯುವುದು ಅವಶ್ಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವ ಉದ್ದೇಶದಿಂದ ಕರಾಟೆ ಟ್ರೇನಿಂಗ್ ಕಲಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ರಾತ್ರಿ ಸಮಯದಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಒಂಟಿಯಾಗಿ ಹೊರಗೆ ಹೋಗುವುದೇ ದುಸ್ತರವಾಗಿರುವ ಇಂದಿನ ದಿನಮಾನಗಳಲ್ಲಿ ಮಹಿಳೆಯರು ತಮ್ಮ ಮಾನ ಪ್ರಾಣ ರಕ್ಷ ಣೆಗಾಗಿ ಕರಾಟೆ ಕಲಿಯುವುದು ಅವಶ್ಯವಾಗಿದೆ. ಕರಾಟೆಯಿಂದ ಏಕಾಗ್ರತೆ, ಶಿಸ್ತುಬದ್ಧ ಜೀವನ ಸಾಧ್ಯವಾಗುತ್ತದೆ. ಪಾಲಕರು ತಮ್ಮ ಮಕ್ಕಳನ್ನು ತರಬೇತಿ ಶಿಬಿರಗಳಲ್ಲಿ ಸೇರ್ಪಡೆ ಮಾಡಬೇಕು. ಇದರಿಂದ ಮಕ್ಕಳಲ್ಲಿ ಚಿಂತನಾ ಶಕ್ತಿ ಹಾಗೂ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಎ.ವಿ. ಪೂಜಪ್ಪ. ಬೆಸ್ಕಾಂ ಎಇ ರಮೇಶ್, ಕರಾಟೆ ಶಿಕ್ಷಕ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಹಾಜರಿದ್ದರು.