ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶವಿಲ್ಲ: ಎಸ್ಪಿ
ಕೋಲಾರ,ಜು,೫-ಜಿಲ್ಲೆಯಲ್ಲಿ ಗ್ಯಾಂಬ್ಲಿಂಗ್, ಡ್ರಗ್ಸ್, ಬೆಟ್ಟಿಂಗ್, ಅಕ್ರಮ ಗಣಿಗಾರಿಕೆ, ಅಕ್ರಮ ಮದ್ಯ ಮಾರಾಟ ಸೇರಿದಂತೆ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದು ನೂತನ ಎಸ್ಪಿ ಬಿ.ನಿಖಿಲ್ ತಿಳಿಸಿದರು.
ನಗರ ಹೊರವಲಯದ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಅವರು ಮಾದ್ಯಮದವರೊಂದಿಗೆ ಮಾತನಾಡಿ, ಪೊಲೀಸ್ ಇಲಾಖೆಯ ಬಗ್ಗೆ ಸಾರ್ವಜನಿಕರಿಗೆ ಇರುವ ಭರವಸೆ ಮತ್ತು ನಂಬಿಕೆ ಉಳಿಸಿಕೊಂಡು ಜನರಿಗೆ ಸ್ಪಂದಿಸುವ ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತೇವೆ ಎಂದರು.
ಜನರು ನಮ್ಮ ಮೇಲೆ ಭರವಸೆ ಇಟ್ಟಿದ್ದಾರೆ, ಅವರ ಸಮಸ್ಯೆಗಳಿಗೆ ನಾವಿದ್ದೇವೆ ಎಂಬುದನ್ನು ತೋರಿಸಬೇಕಾಗಿದೆ, ಅವರಿಗೆ ಖಂಡಿತವಾಗಿಯೂ ಪರಿಹಾರ ಕೊಡುತ್ತೇವೆ, ಜನರಿಗೆ ಸ್ಪಂದಿಸುವ ಅಧಿಕಾರಿಯಾಗಿ ಕೆಲಸ ಮಾಡುವೆ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಒಟ್ಟಿಗೆ ಸೇರಿ ಕೆಲಸ ಮಾಡುತ್ತೇವೆ. ಮಾಧ್ಯಮ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದರು.
ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಅಪರಾಧ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ, ಜನರಿಗೆ ಸ್ಪಂದಿಸುವ ಪೊಲೀಸ್ ಆಗಿ ಕೆಲಸ ಮಾಡುತ್ತೇವೆ, ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಸಬಲೀಕರಣಕ್ಕೆ ಒತ್ತು ನೀಡಲು ಜಿಲ್ಲಾಧಿಕಾರಿ, ಜಿಪಂ ಸಿಇಒ ಅವರೊಂದಿಗೆ ಸೇರಿ ಜಿಲ್ಲೆಗೆ ಸಂಬಂಧಿಸಿದಂತೆ ವಿಶೇಷ ಯೋಜನೆ ರೂಪಿಸುತ್ತೇವೆ, ನಾನು ಕೇವಲ ಭರವಸೆ ಅಷ್ಟೇ ನೀಡಲ್ಲ ಕೆಲಸ ಮಾಡಿ ತೋರಿಸುತ್ತೇನೆ ಎಂದರು.
ನಾನು ಮೂಲತಃ ಚಿತ್ರದುರ್ಗ ಜಿಲ್ಲೆಯವನು, ಬೆಳೆದಿದ್ದು ಓದಿದ್ದು ಬೆಂಗಳೂರಿನಲ್ಲಿ, ೨೦೧೭ನೇ ಬ್ಯಾಚ್‌ನಲ್ಲಿ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ, ಪ್ರಾರಂಭದಲ್ಲಿ ರಾಯಚೂರಿನಲ್ಲಿ ಪ್ರೊಭೆಷನರಿಯಾಗಿ ಕೆಲಸ ಮಾಡಿದೆ, ನಂತರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಎಎಸ್ಪಿಯಾಗಿ ಕೆಲಸ ಮಾಡಿದೆ, ರಾಯಚೂರು ಜಿಲ್ಲೆಯ ಎಸ್ಪಿಯಾಗಿ ಎರಡೂರವರೆ ವರ್ಷ ಸೇವೆ ಸಲ್ಲಿಸಿ ಸಾಕಷ್ಟು ಕಲಿತಿದ್ದೇನೆ, ಸವಾಲು ಎದುರಿಸಿದ್ದೇನೆ ಎಂದು ಪರಿಚಯಿಸಿ ಕೊಂಡರು.
ರಾಯಚೂರು ಮತ್ತು ಕೋಲಾರ ಎರಡು ಅಂತರ್ ರಾಜ್ಯಗಳ ಗಡಿಯಿಂದ ಕೂಡಿದ್ದು ಕೋಲಾರ ಚಿನ್ನಕ್ಕೆ ಅಷ್ಟೇ ಸೀಮಿತವಲ್ಲ ಇಲ್ಲಿನ ಜನ ಕೂಡ ಚಿನ್ನದಂತವರು. ನೆಗೆಟಿವ್ ಊರಾಚೆ ಇಟ್ಟು ಬರಿ ಪಾಸಿಟಿವ್ ಆಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಲಾಗುವುದು. ಅವರ ಕುಟುಂಬದ ಬಗ್ಗೆಯೂ ಕಾಳಜಿ ವಹಿಸಲಾಗುವುದು. ಈ ಮೂಲಕ ಹೆಚ್ಚು ಕಾರ್ಯದಕ್ಷತೆ ತೋರಿಸಲು ದಾರಿ ಮಾಡಿಕೊಲಾಗುವುದು. ಇದಕ್ಕೆ ಸಾರ್ವಜನಿಕರು ಹಾಗೂ ಮಾಧ್ಯಮದ ನೆರವು ಅಗತ್ಯ ಎಂದರು.
ಅಂತರ ರಾಜ್ಯ ಪೊಲೀಸರೊಂದಿಗೆ ಸದ್ಯದಲ್ಲೇ ಸಭೆ ನಡೆಸಿ ಅಂತರ ರಾಜ್ಯ ಅಪರಾಧ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು ಎಂದರು.