ಜಿಲ್ಲೆ ಅಭಿವೃದ್ಧಿಗೆ ಸಂಸದ ಮಲ್ಲೇಶ್ ಸಂಕಲ್ಪ
ಕೋಲಾರ,ಜು,೫- ಕೋಲಾರ ಅವಿಭಜಿತ ಜಿಲ್ಲೆಯಾದ ಚಿಕ್ಕಬಳ್ಳಾಪುರ ಸೇರಿದಂತೆ ಈ ಹಿಂದಿನ ಆಡಳಿತದಲ್ಲಿ ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾವನೆಯಲ್ಲಿದ್ದ ನೂತನ ರೈಲ್ವೆ ಮಾರ್ಗಗಳ ಜೊತೆಗೆ ರಾಷ್ಟ್ರೀಯ ಹೆದ್ದಾರಿಯ ಹಲವು ಹೊಸದಾದ ಮಾರ್ಗಗಳ ಪ್ರಸ್ತಾವನೆಗೆ ಸಂಬಂಧಪಟ್ಟ ಸಚಿವರಾದ ನಿತೀನ್ ಗಡ್ಕರಿ ಹಾಗೂ ವಿ.ಸೋಮಣ್ಣರೊಂದಿಗೆ ಚರ್ಚಿಸುವುದಾಗಿ ಸಂಸದ ಎಂ.ಮಲ್ಲೇಶ್ ಬಾಬು ತಿಳಿಸಿದರು.
ನಗರದ ಹಳೇ ಜಿಲ್ಲಾಧಿಕಾರಿ ಆವರಣದಲ್ಲಿ ಸಂಸದ ಕಚೇರಿಯಲ್ಲಿ ಶಾಸ್ತ್ರೋಸ್ತ್ರವಾಗಿ ಪೂಜೆಸಲ್ಲಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ಕುಪ್ಪಂ, ಬಂಗಾರಪೇಟೆ, ಶ್ರೀನಿವಾಸಪುರ, ಶಿಡ್ಲಘಟ್ಟ ಮಾರ್ಗವಾಗಿ ಬಾಗೇಪಲ್ಲಿಗೆ, ಹೊಸಕೋಟೆ ಮಾರ್ಗವಾಗಿ ಬಾಗೇಪಲ್ಲಿ, ಕೋಲಾರ ಹೊಸೂರು ಎನ್.ಹೆಚ್ ಮಾರ್ಗ ಪ್ರಸ್ತಾವನೆಯಲ್ಲಿದೆ ಈ ಕುರಿತು ಸೋಮವಾರ ಅಥವಾ ಮಂಗಳವಾರ ಸಚಿವರೊಂದಿಗೆ ಚರ್ಚಿಸಿ ಬಜೆಟ್‌ಗೆ ಸೇರ್ಪಡೆ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದರು.
ಕೋಲಾರ ವೈಟ್ ಫೀಲ್ಡ್ ಮಾರ್ಗಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ ಶೇ.೫೦ರಷ್ಟು ಭೂಮಿ ಸ್ವಾಧೀನಕ್ಕೆ ಪಡೆಯಬೇಕೆಂಬುವುದಾಗಿ ಅಥವಾ ಪೂರ್ಣ ಭೂಮಿಯ ವೆಚ್ಚವನ್ನು ರಾಜ್ಯ ಭರಿಸಿದರೆ ಉಳಿದ ಶೇ.೧೦೦ರಷ್ಟ ವೆಚ್ಚ ಬೋರ್ಡ್ ಭರಿಸುವುದಾಗಿ ಹೇಳಲಾಗಿತ್ತು, ಈ ಯೋಜನೆಯು ಪ್ರಸ್ತಾವನೆಯು ನೆನಗುದಿಗೆ ಬಿದ್ದಿರುವುದಕ್ಕೆ ಮರುಜೀವ ಕೊಡಬೇಕಾಗಿದೆ ಎಂದರು.
ಕೋಲಾರ, ವಡಗೂರು, ಮುಳಬಾಗಿಲು, ನಂಗಲಿ, ಮದನಪಲ್ಲಿ ರೈಲು ಮಾರ್ಗವು ಪ್ರಸ್ತಾವನೆಯಲ್ಲಿದೆ, ಇದರ ಜೊತೆಗೆ ಶ್ರೀನಿವಾಸಪುರ ಮೂಲಕ ಮದನಪಲ್ಲಿ ಮಾರ್ಗವು ಸೇರಿದಂತೆ ಎರಡು ಯೋಜನೆಗಳಿದ್ದು ಇದರಲ್ಲಿ ಒಂದು ಯೋಜನೆ ಕೈಗೆತ್ತಿಕೊಳ್ಳಲಿದೆ, ರೈಲ್ವೆ ಕೋಚ್ ಕಾರ್ಖಾನೆ ಈ ಹಿಂದೆ ಪ್ರಸ್ತಾವನೆಯಲ್ಲಿಯಿದ್ದು ಬದಲಾಗಿ ವರ್ಕಶಾಪ್ ಮಾಡಲು ನಿರ್ದರಿಸಿತ್ತು ಇದಕ್ಕೆ ಸಂಬಂಧಪಟ್ಟ ಭೂಮಿಯನ್ನು ರಾಜ್ಯ ಸರ್ಕಾರವು ಇನ್ನು ನೀಡದ ಹಿನ್ನಲೆಯಲ್ಲಿ ವಿಳಂಬವಾಗಿದೆ, ಈ ಕುರಿತು ಸಚಿವ ಸೋಮಣ್ಣರೊಂದಿಗೆ ಚರ್ಚಿಸುವುದಾಗಿ ತಿಳಿಸಿದ ಅವರು, ಒಟ್ಟಾರೆಯಾಗಿ ಉದ್ಯೋಗ ಸೃಷ್ಟಿಯ ಜೊತೆಗೆ ಜಿಲ್ಲೆಯನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಕೋಲಾರ ಜಿಲ್ಲೆಯ ಪ್ರಸಿದ್ದ ಬೆಳೆಯಾದ ಟೊಮೆಟೋ ಮತ್ತು ಮಾವು ಎರಡು ಬೆಳೆಗಳ ಉತ್ಪಾನೆಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಮುಳಬಾಗಿಲು ಮತ್ತು ಕೋಲಾರದಲ್ಲಿ ಬಂಕ್ ಯೂನಿಟ್ ಮಾಡಲು ಚಿಂತಿಸಲಾಗಿದೆ ಈ ಸಂಬಂಧವಾಗಿ ಸರ್ಕಾರದೊಂದಿಗೆ ಪ್ರಸ್ತಾವನೆ ನಡೆಸಲಾಗುವುದು ಎಂದು ಹೇಳಿದರು.
ಕೆ.ಜಿ.ಎಫ್. ವ್ಯಾಪ್ತಿಯ ಬಿಜಿಎಂಎಲ್ ಕಾರ್ಖಾನೆಗೆ ಸೇರಿದ ೧೨ ಸಾವಿರ ಎಕರೆ ಜಮೀನಲ್ಲಿ ಕೈಗಾರಿಕೆಗಳ ಹಬ್ ಮಾಡಲು ಮುಂದಾಗಿದೆ, ಚೆನ್ನೈ ಕೇವಲ ೧೬೦ ಕಿ.ಮೀ ಅಂತದಲ್ಲಿದ್ದರೆ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೇವಲ ೬೦-೭೦ ಕಿ.ಮಿ ಅಂತರದಲ್ಲಿದೆ ಹಾಗಾಗಿ ವ್ಯಾಪಾರ ವಹಿವಾಟಿನಲ್ಲಿ ಸಾಗಣಿಕೆ ಅನುಕೂಲಕರವಾಗಲಿದೆ, ಕಾರ್ಮಿಕರ ಸಮಸ್ಯೆ ಇರುವುದಿಲ್ಲ ಬೇಕಾದಷ್ಟು ಮಂದಿ ಈ ಭಾಗದಲ್ಲಿ ನಿರುದ್ಯೋಗಿಗಳಿದ್ದು ಅವರಿಗೂ ಉದ್ಯೋಗ ನೀಡಿದಂತಾಗುವುದು, ಕೆ.ಜಿ.ಎಫ್ ಟೌನ್ ಇನ್ಸ್‌ಟ್ರಚ್ಚರ್‌ಶಿಫ್ ಅಭಿವೃದ್ದಿ ಹೊಂದಲಿದೆ, ಈ ಯೋಜನೆಯು ಕಳೆದ ೨೦೦೮ರಲ್ಲಿ ಆಗಿನ ಸಚಿವರಾದ ಆಲಂಗೂರು ಶ್ರೀನಿವಾಸ್ ಅವರ ಕನಸಾಗಿತ್ತು ಇದಕ್ಕೆ ಸುಮಾರು ೨೦ ಕೋಟಿ ಯೋಜನೆಯಾಗಿತ್ತು. ಆದರೆ ಇದನ್ನು ಆರ್ಥಿಕ ಸಮಸ್ಯೆಯಿಂದ ಕೈಗೆತ್ತಿ ಕೊಂಡಿರಲಿಲ್ಲ, ಈಗ ಅದಕ್ಕೆ ಪುರ್ನಚಾಲನೆ ನೀಡಬೇಕಾಗಿದೆ ಎಂದರು.
ಕೋಲಾರ ಚಿಕ್ಕಬಳ್ಳಾಪುರ ಅವಿಭಜಿತ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಕೃಷ್ಣ ನದಿ ನೀರು ಅಂಧ್ರ ಪ್ರದೇಶಕ್ಕೆ ನೀಡಿರುವ ಸಂರ್ಪಕವು ನಮ್ಮ ಜಿಲ್ಲೆಯ ಗಡಿಭಾಗ ಹಾದು ಹೋಗಿರುವುದರಿಂದ ಅನುಕೂಲಕರವಾಗಿದೆ, ಈ ಕುರಿತು ಆಂಧ್ರ ಪ್ರದೇಶದ ಮುಖ್ಯ ಮಂತ್ರಿ ಚಂದ್ರಬಾಬು ನಾಯ್ದುರೊಂದಿಗೆ ಚರ್ಚಿಸಿ ಕುಪ್ಪಂ ಜಿಲ್ಲೆಯ ಮಾರ್ಗದಿಂದ ತರಲು ಚಿಂತಿಸಲಾಗಿದೆ, ಈ ಕುರಿತು ಟಿ.ಡಿ.ಪಿ ಅವರೊಂದಿಗೆ ಪ್ರಸ್ತಾವನೆ ಮಾಡಲಾಗಿದೆ ನೀರನ್ನು ಚಾನಲ್‌ಗಳ ಮೂಲಕ ತರಬೇಕಾಗುತ್ತದೆಯೋ ಅಥವಾ ಪಂಪ್ ಮಾಡಬೇಕಾಗುತ್ತದೆಯೋ ಎಂಬುವುದರ ಕುರಿತು ತಜ್ಞರೊಂದಿಗೆ ಚರ್ಚಿಸಬೇಕಾಗಿದೆ ಎಂದು ತಿಳಿಸಿದರು.
ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ಶ್ರೀನಿವಾಸಪುರ ಹೊರವಲಯದಲ್ಲಿ ೨ ಸಾವಿರ ಎಕರೆ ಮತ್ತು ೩ ಸಾವಿರ ಎಕರೆ ಜಮೀನಿನನ್ನು ಕೆ.ಐ.ಎ.ಡಿ.ಬಿ. ವತಿಯಿಂದ ಕೈಗಾರಿಕೆಗಳ ಅಭಿವೃದ್ದಿಗೆ ಒತ್ತುನೀಡಲು ಚಿಂತಿಸಲಾಗಿದೆ. ನಮ್ಮ ಪಕ್ಷದ ಸಂಸದರಾದ ಕುಮಾರಸ್ವಾಮಿ ಬೃಹತ್ ಕೈಗಾರಿಕೆ ಸಚಿವರಾಗಿರುವುದರಿಂದ ನಮಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕೋಲಾರ ಜಿಲ್ಲೆಗೆ ಸಂಬಂಧಿಸಿದಂತೆ ಇಬ್ಬರು ಶಾಸಕರು. ಓರ್ವ ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರು ಸೇರಿದಂತೆ ೪ ಮಂದಿಯ ನಿಯೋಗವು ಸರ್ಕಾರದೊಂದಿಗೆ ಚರ್ಚಿಸಿ ಅಭಿವೃದ್ದಿ ಯೋಜನೆಗಳನ್ನು ತರುತ್ತೇವೆ, ಅಧಿಕಾರಿಗಳು ನಮ್ಮ ನಡುವಳಿಕೆಗಳಿಗೆ ತಕ್ಕಂತೆ ಸ್ಪಂದಿಸುತ್ತಾರೆ. ಯಾವುದೇ ಕೆಲಸಗಳು ಕಾನೂನು ಪ್ರಕಾರ ಇದ್ದಲ್ಲಿ ಅನುಷ್ಟಾನಕ್ಕೆ ತರಲು ಒತ್ತಡ ತರಬಹುದಾಗಿದೆ ಎಂದು ಪ್ರತಿಕ್ರಿಯಿಸಿದರು.
ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಜೆ.ಡಿ.ಎಸ್. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಣಕನಹಳ್ಳಿ ನಟರಾಜ್, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ವಡಗೂರು ರಾಮು, ತಾಲ್ಲೂಕು ಅಧ್ಯಕ್ಷ ಬಾಬು ಮೌನಿ, ಕೆ.ಡಿ.ಪಿ.ಸದಸ್ಯ ಅರಹಳ್ಳಿ ಅಶ್ವಥ್ ಗೌಡ ಇದ್ದರು.