ಜ್ಞಾನಕ್ಕಾಗಿ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಿ
ಕೋಲಾರ,ಜು೫:ಖಾಸಗಿ ಶಾಲೆಗಳಲ್ಲಿನ ಶಿಕ್ಷಣ ಓದಿಗೆ ಸೀಮಿತ ಆದರೆ ಸರ್ಕಾರಿ ಶಾಲೆಗಳಲ್ಲಿ ಬದುಕಿನ ಜ್ಞಾನ, ಸಂಸ್ಕಾರ ಕಲಿಸಲಾಗುತ್ತದೆ, ಕೀಳಿರಿಮೆ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿ ಎಂದು ಶಾಹಿ ಎಕ್ಸ್‌ಪೋರ್ಟ್ಸ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಬೈರೇಗೌಡ ಕರೆ ನೀಡಿದರು.
ತಾಲ್ಲೂಕಿನ ಚೌಡದೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಶಾಹಿ ಎಕ್ಸ್‌ಪೋರ್ಟ್ಸ್ ಸಂಸ್ಥೆಯ ‘ಅಕ್ಷರ’ ಶಾಹಿ ಶಿಕ್ಷಣಮ್ ಯೋಜನೆಯಡಿ ಸಿಎಸ್‌ಆರ್ ನಿಧಿಯಿಂದ ಕೊಡುಗೆಯಾಗಿ ನೀಡಲಾದ ಡೆಸ್ಕ್‌ಗಳು, ಅಲ್ಮೇರಾಗಳು, ಟೇಬಲ್,ಚೇರ್, ಕಂಪ್ಯೂಟರ್, ಬ್ಯಾಂಡ್‌ಸೆಟ್ ಮತ್ತಿತರ ೩ ಲಕ್ಷ ಮೌಲ್ಯದ ಸಲಕರಣೆಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ನೀವಿಂದು ಆದರ್ಶ ವ್ಯಕ್ತಿಗಳಾಗಿ ಗುರುತಿಸಿಕೊಂಡಿರುವ ಎಲ್ಲಾ ಮಹನೀಯರು ಸರ್ಕಾರಿ ಶಾಲೆಗಳಲ್ಲಿ ಓದಿದವರೇ, ಇಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ಶಿಕ್ಷಕರಿದ್ದಾರೆ, ಒಳ್ಳೆಯ ವಾತಾವರಣವಿದೆ,ಸಮಾಜದ ಪರಿಚಯ ನಿಮಗಾಗುತ್ತದೆ ಎಂದು ತಿಳಿಸಿದರು.
ಮಕ್ಕಳಿಗೆ ಪಠ್ಯಕಲಿಕೆ ಮಾತ್ರವಲ್ಲ, ಕ್ರೀಡೆ,ಸಾಂಸ್ಕೃತಿಕ ಚಟುವಟಿಕೆ, ಸಂಸ್ಕಾರ, ಬದುಕುಕಲಿಸುವ ಸಮಗ್ರ ಶಿಕ್ಷಣದ ಅಗತ್ಯವಿದೆ, ಇಂದು ಅತ್ಯುನ್ನತ ವ್ಯಾಸಂಗ ಮಾಡಿದ ಅನೇಕರು ಭಯೋತ್ಪಾದಕ ಚಟುವಟಿಕೆಗಳಡಿ ಬಂಧನಕ್ಕೆ ಒಳಗಾಗಿರುವುದನ್ನು ಕಂಡಿದ್ದೇವೆ, ಆದ್ದರಿಂದ ಶಿಕ್ಷಣದಲ್ಲಿ ಮೌಲ್ಯಗಳಿರಬೇಕು, ಸಂಸ್ಕಾರ,ಸಮುದಾಯದೊಂದಿಗೆ ಸಂಬಂಧದ ಮಹತ್ವ ಮಕ್ಕಳಿಗೆ ತಿಳಿಸಿಕೊಡಬೇಕು ಎಂದರು.
ಶಾಹಿ ಗಾರ್ಮೆಂಟ್ಸ್ ಸಂಸ್ಥೆ ದೇಶದ ವಿವಿಧೆಡೆ ತನ್ನ ಕಂಪನಿಗಳನ್ನು ನಡೆಸುತ್ತಿದ್ದು, ೧.೬೫ ಲಕ್ಷಮಂದಿಗೆ ಉದ್ಯೋಗ ನೀಡಿದೆ, ನಾವು ಉದ್ಯೋಗ ಮಾತ್ರವಲ್ಲ ಅದರ ಜತೆಯಲ್ಲೇ ಸಮುದಾಯದ ಅಭಿವೃದ್ದಿಗೂ ನಮ್ಮ ಕೈಲಾದಷ್ಟು ಕೊಡುಗೆ ನೀಡುತ್ತಾ ಬಂದಿದ್ದೇವೆ ಎಂದರು.
ಶಾಹಿ ಎಕ್ಸ್‌ಪೋರ್ಟ್ಸ್ ಕಂಪನಿ ಈ ಭಾಗದ ಹಲವಾರು ಶಾಲೆಗಳಿಗೆ ನೆರವು ನೀಡುತ್ತಾ ಬಂದಿದೆ, ನಮ್ಮ ಉದ್ದೇಶ ಗ್ರಾಮೀಣ ಮಕ್ಕಳಿಗೆ ಉತ್ತಮ ಸೌಲಭ್ಯ ಸಿಗಬೇಕೆಂಬುದೇ ಆಗಿದ್ದು, ಶಾಲೆಗೆ ನೀಡಿರುವ ಪರಿಕರಗಳ ಪ್ರಯೋಜನ ಪಡೆದುಕೊಳ್ಳಿ ಎಂದ ಅವರ, ಶಾಲೆ ಆವರಣಕ್ಕೆ ಶೀಟ್ ಮೇಲ್ವೊದಿಕೆ, ಸುಸಜ್ಜಿತ ಶೌಚಾಲಯ ನಿರ್ಮಾಣಕ್ಕೂ ಕ್ರಮವಹಿಸಿರುವುದಾಗಿ ತಿಳಿಸಿದರು.
ಅರಾಭಿಕೊತ್ತನೂರು ಗ್ರಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ, ಶಾಲೆಗಳ ಅಸ್ಥಿತ್ವಕ್ಕೆ ಧಕ್ಕೆ ಬಂದರೆ ಅದು ಸಮಾನ ಶಿಕ್ಷಣಕ್ಕೆ ಹೊಡೆತ ಬಿದ್ದಂತೆ ಎಂದು ಎಚ್ಚರಿಸಿ, ಸರ್ಕಾರಿ ಶಾಲೆಗಳ ಉಳಿವಿಗಾಗಿ ಸೌಲಭ್ಯ ಒದಗಿಸಿರುವ ಶಾಹಿ ಎಕ್ಸ್‌ಪೋರ್ಟ್ಸ್ ಸಂಸ್ಥೆಗೆ ಧನ್ಯವಾದ ಸಲ್ಲಿಸಿದರು.
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸೌಮ್ಯಲತಾ ಮಾತನಾಡಿ, ಶಾಲಾ ಶಿಕ್ಷಣ ಇಲಾಖೆ ಸಮುದಾಯದತ್ತ ಶಾಲೆ ಬದಲಾಗಿ ಶಾಲೆಯತ್ತ ಸಮುದಾಯ ಎಂಬ ಧ್ಯೇಯವಾಕ್ಯದೊಂದಿಗೆ ಇಂದು ಕೆಲಸ ಮಾಡುತ್ತಿದೆ, ಇಲ್ಲಿ ಸಮವಸ್ತ್ರ,ಪುಸ್ತಕ ಬಿಸಿಯೂಟ, ಹಾಲು, ಮೊಟ್ಟೆ ಎಲ್ಲವೂ ಉಚಿತವಾಗಿ ಸಿಗುತ್ತಿದೆ, ಮಕ್ಕಳನ್ನು ದಾಖಲಿಸಿ ಎಂದು ತಿಳಿಸಿ, ಶಾಹಿ ಸಂಸ್ಥೆಯವರು ಈ ಗ್ರಾ.ಪಂ ವ್ಯಾಪ್ತಿಯ ಎಲ್ಲಾ ೧೪ ಸರ್ಕಾರಿ ಶಾಲೆಗಳಿಗೂ ನೆರವಿನ ಹಸ್ತ ಚಾಚಬೇಕು ಎಂದು ಕೋರಿದರು.
ಗ್ರಾಮದ ಮುಖಂಡ ಶಿವರಾಜ್ ಈ ಶಾಲೆಗೆ ಆಟದ ಮೈದಾನದ ಅಗತ್ಯವಿದ್ದು, ಗ್ರಾಮದಂಚಿನಲ್ಲಿರುವ ಸರ್ಕಾರಿ ಜಾಗವನ್ನು ಒದಗಿಸಿಕೊಡಲು ಕೋರಿದರು. ಕಾರ್ಯಕ್ರಮದಲ್ಲಿ ಸ್ವಾಗತಿಸಿ, ನಿರೂಪಿಸಿದ ಶಿಕ್ಷಕ ಸೋಮಶೇಖರ್ ನಮ್ಮ ಶಾಲೆಯ ಮನವಿಗೆ ಸ್ಪಂದಿಸಿ ನೆರವು ಒದಗಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು.
ಶಾಹಿ ಎಕ್ಸ್‌ಪೋರ್ಟ್ಸ್ ಸಂಸ್ಥೆಯ ಸೀನಿಯರ್ ಎಕ್ಸಿಕ್ಯೂಟೀವ್‌ಗಳಾದ ಧನಂಜಯ್‌ಕುಮಾರ್, ಎಂ.ಜೆ.ಸ್ಪೂರ್ತಿ, ಗ್ರಾ.ಪಂ ಉಪಾಧ್ಯಕ್ಷ ನಾಗೇಶ್, ಸದಸ್ಯ ನಾಗರಾಜ್, ಮುಖ್ಯಶಿಕ್ಷಕಿ ಟಿ.ಆರ್.ಭಾಗ್ಯಮ್ಮ, ಎಸ್‌ಡಿಎಂಸಿ ಅಧ್ಯಕ್ಷೆ ಶೈಲಜ, ಮಾಜಿ ಅಧ್ಯಕ್ಷ ಗಂಗಣ್ಣ, ಸದಸ್ಯರಾದ ಲಕ್ಷ್ಮಯ್ಯ, ಶಿವು, ಆಂಜಿನಪ್ಪ, ಮಣಿಕಂಠ, ಉಜಿನಪ್ಪ, ಶಾರದಮ್ಮ, ಕೋಮಲಮ್ಮ, ಸವಿತಾ, ಪವಿತ್ರಾ, ಗ್ರಾ.ಪಂ ಲೆಕ್ಕಾಧಿಕಾರಿ ಮಧು, ಶಿಕ್ಷಕ ವೆಂಕಟರೆಡ್ಡಿ,ಶಿಕ್ಷಕಿ ಕೆ.ಟಿ.ಪುಷ್ಪಾ ಮತ್ತಿತರರಿದ್ದು,ಕೀರ್ತಿ,ಸೌಜನ್ಯ, ದಿವ್ಯಾ ಪ್ರಾರ್ಥಿಸಿದರು.