ಬಿಜೆಪಿ ಕಾರ್ಯಕರ್ತರಿಂದ ಮುಡಾ ಮುತ್ತಿಗೆ ಯತ್ನ
ಸಂಜೆವಾಣಿ ನ್ಯೂಸ್
ಮೈಸೂರು: ಜು.05:- ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿರುವ ಬಹುಕೋಟಿ ಹಗರಣ ಖಂಡಿಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಮುಡಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ನಗರದ ಬಿಜೆಪಿ ಕಚೇರಿ ಬಳಿ ಸಮಾವೇಶಗೊಂಡ ಬಳಿಕ ಮುಡಾ ಕಚೇರಿಗೆ ಕಾಲ್ನಡಿಗೆಯಲ್ಲಿ ಸಾಗಿದ ನೂರಾರು ಬಿಜೆಪಿ ಕಾರ್ಯಕರ್ತರನ್ನು ರಾಮಸ್ವಾಮಿ ವೃತ್ತದ ಸಮೀಪವಿರುವ ಮಹಾರಾಜ ಹೋಟೆಲ್ ಬಳಿ ಪೆÇಲೀಸರು ತಡೆದರು. ಈ ವೇಳೆ ಕಾರ್ಯಕರ್ತರು ಪೊಲೀಸರ ನಡುವೆ ಮಾತಿನ ಚಕಮಕಿ ಉಂಟಾಯಿತು. ಮುಡಾ ಕಚೇರಿವರೆಗೆ ಕಾಲ್ನಡಿಗೆಯಲ್ಲಿ ತೆರಳಲು ಅವಕಾಶ ಕೊಡಿ ಎಂದು ಕೇಳಿದರೂ ಪೊಲೀಸರು ಅವಕಾಶ ನೀಡಲಿಲ್ಲ.
ಈ ವೇಳೆ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೆÇಲೀಸರು ವಾಹನದಲ್ಲಿ ಕರೆದೊಯ್ದರು.
ಈ ವೇಳೆ ಮಾತನಾಡಿದ ಮಾಜಿ ಮೇಯರ್ ಶಿವಕುಮಾರ್, ಮುಡಾದಲ್ಲಿ ನಿವೇಶನಗಳ ಹಂಚಿಕೆಯಲ್ಲಿ ಭಾರೀ ಅಕ್ರಮವೆಸಗಲಾಗಿದೆ. ಬಡವರ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಬಡವರಿಗೆ ಸೇರಬೇಕಾದ ನಿವೇಶಗಳನ್ನು ಬಲಾಢ್ಯರಿಗೆ ನೀಡಿದೆ. 50:50 ನಿವೇಶನ ಹಂಚಿಕೆಯಲ್ಲಿ ಭಾರೀ ಅಕ್ರಮವೆಸಗಿದ್ದು, ಕಾನೂನುಬಾಹಿರವಾಗಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇದರಿಂದಾಗಿ ಪ್ರಾಧಿಕಾರಕ್ಕೆ 4 ಸಾವಿರ ಕೋಟಿಗೂ ಅಧಿಕ ಹಣ ನಷ್ಟವಾಗಿದೆ. ಸರ್ಕಾರ ಹಗರಣದಲ್ಲಿ ಭಾಗಿಯಾದವರನ್ನು ರಕ್ಷಿಸಲು ಹೊರಟಿದ್ದು, ಕೂಡಲೇ ಸಂಬಂಧಿಸಿದ ಎಲ್ಲಾ ಅಧಿಕಾರಿಗಳನ್ನು ಅಮಾನತು ಮಾಡಿ ಜೈಲಿಗೆ ಕಳುಹಿಸಬೇಕು. ನಗಗರಾಭಿವೃದ್ಧಿ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ದಲಿತರ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ದಲಿತ ವಿರೋಧಿ ಕೆಲಸ ಮಾಡುತ್ತಿದೆ. ಸಂವಿಧಾನದ ವಿಚಾರವಿಟ್ಟುಕೊಂಡು ಬಿಜೆಪಿ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಿದೆ. ಹಾಲು, ಇಂಧನ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತಿದೆ ಎಂದು ಕಿಡಿ ಕಾರಿದರು.
ಪ್ರತಿಭಟನೆಯಲ್ಲಿ ಪಾಲಿಕೆ ಮಾಜಿ ಸದಸ್ಯ ಬಿ.ವಿ.ಮಂಜುನಾಥ್, ಮುಖಂಡರಾದ ಮಿರ್ಲೆ ಶ್ರೀನಿವಾಸಗೌಡ, ಜೋಗಿ ಮಂಜು, ಬಿ.ಎಂ.ರಘು, ಮಹೇಶ್‍ರಾಜೇ ಅರಸ್ ರಾಕೇಶ್‍ಗೌಡ, ಕಿರಣ್‍ಕುಮಾರ್‍ಗೌಡ, ನಿಶಾಂತ್, ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಮಸ್ವಾಮಿ ವೃತ್ತದಿಂದ ಮುಡಾ ಕಚೇರಿಗೆ ಸಾಗುವ ರಸ್ತೆಯುದ್ದಕ್ಕೂ ಬಿಗಿ ಪೆÇಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.