ಸಹಕಾರ ಸಂಘಕ್ಕೆ ವಿಧಿಸಿದ್ದ ರೂ.10.57 ಲಕ್ಷ ತೆರಿಗೆ ರದ್ದು
ಸಂಜೆವಾಣಿ ವಾರ್ತೆ
ಮಂಡ್ಯ:ಜು.5:- ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಠೇವಣಿ ಹಣದ ಮೇಲೆ ಆದಾಯ ತೆರಿಗೆ ವಿಧಿಸುವ ಮೂಲಕ ಕೇಂದ್ರ ಸರ್ಕಾರ ಕೃಷಿ ಸಹಕಾರ ಬ್ಯಾಂಕುಗಳಿಗೆ ಕಿರುಕುಳ ನೀಡುತ್ತಿದೆ ಎಂದು ಮಂಡ್ಯ ಜಿಲ್ಲಾ ಸಹಕಾರಿಗಳ ವೇದಿಕೆ ಟ್ರಸ್ಟ್ ಕಾರ್ಯದರ್ಶಿ ಕೌಡ್ಲೆ ಚನ್ನಪ್ಪ ಆರೋಪಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಜಿಲ್ಲೆಯಲ್ಲಿ 243 ವ್ಯವಸಾಯ ಸಹಕಾರ ಸಂಘಗಳು ,1200 ಹಾಲು ಉತ್ಪಾದಕರ ಸಹಕಾರ ಸಂಘಗಳು, 272 ನೀರು ಬಳಕೆದಾರರ ಸಹಕಾರ ಸಂಘಗಳು ಹಾಗೂ 460 ವಿವಿಧ ಸಹಕಾರ ಸಂಘಗಳಿದ್ದು, ಆದರೆ ಈ ಸಹಕಾರ ಸಂಘಗಳ ಮೇಲೆ ಆದಾಯ ತೆರಿಗೆ ಹೇರಲು ಅವಕಾಶವಿಲ್ಲ ಎಂದರು.
ಎಂಡಿಸಿಸಿ ಬ್ಯಾಂಕಿನಲ್ಲಿ ಸಾರ್ವಜನಿಕರು ಠೇವಣಿ ಹಣವನ್ನು ಇಟ್ಟಿದ್ದಾರೆ.ಆದರೆ ಕೇಂದ್ರ ಸರ್ಕಾರ ಆದಾಯ ತೆರಿಗೆ ನೆಪದಲ್ಲಿ ತೆರಿಗೆಯನ್ನು ವಿಧಿಸಿ ಸಹಕಾರ ಸಂಘಕ್ಕೆ ಕಿರುಕುಳ ನೀಡುತ್ತಿದೆ ಎಂದು ದೂರಿದರು .
ಕೆ.ಆರ್.ಪೇಟೆ ತಾಲೂಕು ಹೊಸ ಹೊಳಲು ಪ್ರಾಥಮಿಕ ಪತ್ತಿನ ಸಹಕಾರ ಸಂಘ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ 25,08,402 ಹಣ ಠೇವಣಿ ಇಟ್ಟಿದ್ದು ಇದರ ಬಡ್ಡಿಯ ಮೇಲೆ ಆದಾಯ ತೆರಿಗೆ ಇಲಾಖೆಯು 10 ಲಕ್ಷದ 57ಸಾವಿರದ 454 ರೂಪಾಯಿ ತೆರಿಗೆ ವಿಧಿಸಿದ್ದು ಇದು ಅಪರಾಧವಾಗಿದೆ ಎಂದರು. ಹೈಕೋರ್ಟ್ ಕೃಷಿ ಸಹಕಾರ ಸಂಘಗಳ ಮೇಲೆ ತೆರಿಗೆ ವಿಧಿಸದಂತೆ ಆದೇಶ ನೀಡಿದೆ .ಆದರೂ ಕೂಡ ತೆರಿಗೆ ವಿಧಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆದಾಯ ತೆರಿಗೆ ಇಲಾಖೆ ಆದೇಶದ ವಿರುದ್ಧ ಕಮಿಷನರ್ ಆಫ್ ಇನ್ಕಮ್ ಟ್ಯಾಕ್ಸ್ ನ್ಯಾಯಾಲಯದಲ್ಲಿ ಮೇಲ್ಮನೆ ಸಲ್ಲಿಸಲಾಗಿ ಮೇಲ್ಮನವಿಯನ್ನು ನ್ಯಾಯಾಲಯ ಎತ್ತಿ ಹಿಡಿದಿದೆ ಎಂದು ತಿಳಿಸಿದರು .
ಕೂಡಲೇ ಕೇಂದ್ರ ಸರ್ಕಾರ ಸಹಕಾರ ಸಂಘಗಳ ಮೇಲೆ ತೆರಿಗೆ ಹಾಕುವುದನ್ನು ಕೈಬಿಡಬೇಕು. ಇಂತಹ ಅವೈಜ್ಞಾನಿಕ ಹಾಗೂ ಅಸಂಬದ್ಧ ನೀತಿಗಳನ್ನು ಕೈಬಿಡಬೇಕು .
ಈ ಬಗ್ಗೆ ಸಹಕಾರ ಸಂಘಗಳ ಮಹಾಮಂಡಳಗಳು ಹೋರಾಟಕ್ಕೆ ಮುಂದಾಗಬೇಕು ಎಂದು ಕರೆಯಿತ್ತರು. ಸುದ್ದಿಗೋಷ್ಠಿಯಲ್ಲಿ ಮಂಡ್ಯ ಜಿಲ್ಲಾ ಸಹಕಾರಿಗಳ ವೇದಿಕೆ ಟ್ರಸ್ಟ್ ಅಧ್ಯಕ್ಷ ಹೆಚ್.ಸಿದ್ದಯ್ಯ ,ಶಂಕರೇಗೌಡ, ವಕೀಲ ದೊರೆಸ್ವಾಮಿ ಉಪಸ್ಥಿತರಿದ್ದರು.