ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಹಗರಣಗಳ ಬಗ್ಗೆ ತನಿಖೆ ನಡೆಸಿ
ಸಂಜೆವಾಣಿ ವಾರ್ತೆ
ಮಂಡ್ಯ:ಜು.05- ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂಪಾಯಿ ಬೃಹತ್ ಹಗರಣಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಂಡ್ಯ ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಚಂದ್ರನಾಯಕ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 2024ರ ಜೂನ್ ತಿಂಗಳಿನಲ್ಲಿ 187 ಕೋಟಿ ರೂಪಾಯಿ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. ಈ ಹಗರಣದಲ್ಲಿ 193 ಬ್ಯಾಂಕ್ ಖಾತೆದಾರರುಗಳಿಗೆ ಹಣ ವರ್ಗಾವಣೆಯಾಗಿದೆ ಎಂದು ತಿಳಿಸಿದರು.
ಎಸ್‍ಐಟಿ ಮತ್ತು ಸಿಬಿಐ ಅವ್ಯವಹಾರದ ಬಗ್ಗೆ ಹಣ ವರ್ಗಾವಣೆಯಾಗಿರುವ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.ತಪ್ಪಿತಸ್ಥರಿಂದ ಬಡ್ಡಿ ಸಮೇತ ಹಣ ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.
ತಕ್ಷಣವೇ ಭ್ರಷ್ಟರನ್ನು ಬಂಧಿಸಬೇಕು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ಪುಟ್ಟಸ್ವಾಮಿ,ಅರಕೇಶ,ಪಾಪಯ್ಯ, ಲೋಕೇಶ್, ಶ್ರೀನಿವಾಸ್,ಪ್ರಮೀಳಾ,ಸೇರಿದಂತೆ ಇತರರಿದ್ದರು.