ಶವಸಂಸ್ಕಾರಕ್ಕೆ ಸಿಗದ ಭೂಮಿ;ಗ್ರಾಮಸ್ಥರ ಪ್ರತಿಭಟನೆ
ಸಂಜೆವಾಣಿ ವಾರ್ತೆ
ದಾವಣಗೆರೆ, ಜು.4: ಹಿಂದುಗಳ ಶವಸಂಸ್ಕಾರಕ್ಕೆ ಹಿಂದು ರುದ್ರಭೂಮಿಯಲ್ಲೇ ಅವಕಾಶ ನೀಡದಿರುವುದನ್ನು ಖಂಡಿಸಿ ಚನ್ನಗಿರಿ ತಾ. ಸೋಮಲಾಪುರ ಗ್ರಾಮಸ್ಥರು ನಗರದ ಜಿಲ್ಲಾಡಳಿತ ಭವನದ ಎದುರು  ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಚನ್ನಗಿರಿ ತಾ. ಸಂತೇಬೆನ್ನೂರು ಸಮೀಪದ ಸೋಮಲಾಪುರ ಗ್ರಾಮಸ್ಥರು ಹಿಂದು ಜಾಗರಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ರಿಗೆ ಮನವಿ ಪತ್ರವನ್ನು ಅರ್ಪಿಸಿದರು.ಇದೇ ವೇಳೆ ಮಾತನಾಡಿದ ಗ್ರಾಮಸ್ಥರು, ಸಂತೇಬೆನ್ನೂರಿಗೆ ಹೊಂದಿಕೊಂಡಿರುವ ಸೋಮಲಾಪುರ ಗ್ರಾಮದಲ್ಲಿ ಸ್ಮಶಾನ ಜಾಗಕ್ಕೆಂದು 5 ಎಕರೆ ಜಮೀನಿದೆ. ಇದನ್ನು ಮುಸ್ಲಿಂ ವಕ್ಫ್‌ ಬೋರ್ಡ್‌ಗೆ ಅಕ್ರಮವಾಗಿ ಮಾಡಿಕೊಟ್ಟಿದ್ದು,ಈಗ ಹಿಂದುಗಳಲ್ಲಿ ಯಾರೇ ಸಾವನ್ನಪ್ಪಿದರೂ ಅಂತ್ಯ ಸಂಸ್ಕಾರಕ್ಕೆ ಸ್ಮಶಾನದ ಇಲ್ಲದ ಪರಿಸ್ಥಿತಿ ನಿರ್ಮಾಣ‍ವಾಗಿದೆ ಎಂದರು.ಸೋಮಲಾಪುರ ಗ್ರಾಮದ ಸುಾರು 2747 ಜನಸಂಖ್ಯೆ ಹೊಂದಿರುವ ಸುಮಾರು 700 ಮನೆಗಳಿರುವ ಗ್ರಾಮದ. ಇಲ್ಲಿ ಬಹುತೇಕ ಎಲ್ಲರೂ ಕೃಷಿಕರಾಗಿದ್ದು, ತಮ್ಮ ಗ್ರಾಮದಲ್ಲಿ ಸುಮಾರು 2567 ಹಿಂದುಗಳಿದ್ದಾರೆ. ಮುಸ್ಲಿಮರ ಜನಸಂಖ್ಯೆ ಅಂದಾಜು 180 ಜನರಷ್ಟೇ. ಸೋಮಲಾಪುರದಲ್ಲಿ ಪುರಾತನ ಶ್ರೀ ದುರ್ಗಾಂಬಿಕಾ ದೇವಸ್ಥಾನ, ಬೀರಪ್ಪನ ಗುಡಿ, ಶ್ರೀ ಬನಶಂಕರಿ ದೇವಸ್ಥಾನ, ಶ್ರೀ ಮಂಜುುನಾಥ ಸ್ವಾಮಿ, ಶ್ರೀ ಬಸವೇಶ್ವರ ದೇವಸ್ಥಾನಗಳೂ ಇವೆ ಎಂದು ಅವರು ತಿಳಿಸಿದರು.ಇಡೀ ಗ್ರಾಮದ ಹಿಂದುಗಳು ರಿ.ಸ.ನಂ.111ರ ಪೂರ್ಣ ವಿಸ್ತೀರ್ಣ 8.31 ಎಕರೆ ಇದ್ದು, ಇದರಲ್ಲಿ 5.31 ಎಕರೆ ಪ್ರದೇಶದಲ್ಲಿ ಸಂಪ್ರದಾಯಬದ್ಧವಾಗಿ ಶವ ಸಂಸ್ಕಾರ ಮಾಡಿಕೊಂಡು ಬಂದಿದ್ದೇವೆ. ಇಂದಿಗೂ ಅದನ್ನು ರುದ್ರಭೂಮಿಯಾಗಿ ಬಳಸುತ್ತಿದ್ದೇವೆ. 2024ನೇ ಬೇಸಿಗೆ ಹಂಗಾಮಿನಲ್ಲಿ ರುದ್ರಭೂಮಿಯಲ್ಲಿ ಸಾಕಷ್ಟು ಗುಂಡಿ ಬಿದ್ದಿದ್ದರಿಂದ ಅವುಗಳನ್ನು ಮುಚ್ಚಿ, ಸಮತಟ್ಟು ಪ್ರದೇಶವನ್ನು ಮಾಡಲು ಇಡೀ ಗ್ರಾಮಸ್ಥರು ಸೂಳೆಕೆರೆ ಬತ್ತಿದ್ದರಿಂದ ಕೆರೆ ಅಂಗಳದ ಮಣ್ಣು ತಂದು ಹಾಕಿದ್ದೆವು ಎಂದು ಅವರು ಹೇಳಿದರು.ಈಗ ಸೋಮಲಾಪುರ ಗ್ರಾಮದ ಮುಸ್ಲಿಂ ಸಮಾಜದ 15-20 ಜನರು ರುದ್ರಭೂಮಿ ಜಾಗ ತಮಗೆ ಸೇರಿದ್ದು, ಅದು ವಕ್ಫ್ ಆಸ್ತಿಯೆಂದು, ಅಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಬಾರದು, ಶವ ಸಂಸ್ಕಾರ ಮಾಡಬಾರದೆಂದು, ಒಂದು ವೇಳೆ ಶವ ಸಂಸ್ಕಾರ ಮಾಡಬೇಕೆಂದರೆ ತಮ್ಮನ್ನು ಕೇಳಿಯೇ ಮಾಡಬೇಕೆಂಬುದಾಗಿ ಹೇಳುತ್ತಿದ್ದಾರೆ. ಗ್ರಾಮದಲ್ಲಿ ಶಾಂತಿ ಭಂಗ ಆಗಬಾರದು, ಸಾಮರಸ್ಯಕ್ಕೆ ಧಕ್ಕೆ ಆಗಬಾರದೆಂದು ಸೌಹಾರ್ದತೆಯಿಂದ ಎಲ್ಲರೂ ಇರಬೇಕೆಂಬ ಕಾರಣಕ್ಕೆ ರುದ್ರಭೂಮಿ ಅಭಿವೃದ್ಧಿ ಕೆಲಸ ಸ್ಥಗಿತಪಡಿಸಿದ್ದೇವೆ ಎಂದು ಅವರು ತಿಳಿಸಿದರು.ಕಂದಾಯ ಇಲಾಖೆಗೆ ತಾವು ಮಾಹಿತಿ ಕೇಳಿದಾಗ ಅದು ಮೂಲತಃ ಕಂದಾಯ ಇಲಾಖೆಗೆ ಸೇರಿದ್ದಾಗಿದೆ. ಆರ್‌ಆರ್ ನಂ.373ರಂದೆ ಖಬರಸ್ಥಾನ ಎಂಬುದಾಗಿ ನಮೂದಿಸಲಾಗಿದೆ. ನಂತರ ದಾಖಲಾತಿಗಳಲ್ಲಿ ಎಂಆರ್‌ಎಂ ನಂ.2-1984-85ರಲ್ಲಿ ಅರಣ್ಯ ಇಲಾಖೆ ಎಂಬುದಾಗಿ ನಮೂದಿಸಲಾಗಿದೆ. ನಂತರ ವರ್ಷದಲ್ಲಿ ಜಮೀನಿನಲ್ಲಿ ಉಪಯೋಗವನ್ನು ಖುಷ್ಕಿ ಎಂಬುದಾಗಿ ದಾಖಲಿಸಲಾಗಿದೆ. 12.1.1982ರ ಸಾರ್ವಜನಿಕರ ತಿಳಿವಳಿಕೆಯಲ್ಲಿ 3 ಎಕರೆಯಿಂದ 8.31 ಎಕರೆಗೆ ತಿದ್ದುಪಡಿ ಮಾಡಿರುವುದು ಕಂಡು ಬಂದಿದೆ ಎಂದು ಅವರು ಆರೋಪಿಸಿದರು.ರುದ್ರಭೂಮಿಗಾಗಿ ಬಳಸಿದ್ದಕ್ಕೆ ಅಲ್ಲಿ ಇಂದಿಗೂ ಸಾಕಷ್ಟು ಅಂತ್ಯಕ್ರಿಯೆ ನಡೆಸಿದ ಕುರುಹುಗಳಿವೆ. ಯಾರೋ ದುರಾಲೋಚನೆಯಿಂದ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ, ಮೋಸ, ವಂಚನೆಯಿಂದ ಹಿಂದುಗಳ ರುದ್ರಭೂಮಿ ಜಾಗವನ್ನು ಖಬರಸ್ಥಾನ ಎಂಬುದಾಗಿ ನಮೂದಿಸಿದ್ದಾರೆ. ಈ ರೀತಿ ದಾಖಲಿಸಿರುವುದಕ್ಕೆ ಯಾವುದೇ ಆದಾರ ಇಲ್ಲ. ಹಾಗಿದ್ದರೆ ಯಾವುದೇ ಆದಾರ ಇಲ್ಲದೇ ದಾಖಲಿಸಿದ್ದು ಹೇಗೆ? ಇಡೀ 8.31 ಎಕರೆ ಪ್ರದೇಶವನ್ನು ಆರ್‌ಟಿಸಿಯಲ್ಲಿ ಖಬರಸ್ಥಾನ ಎಂಬುದಾಗಿ ದಾಖಲಿಸಿದ್ದಕ್ಕೆ ಆದಾರ ಇಲ್ಲ. ಮುಸ್ಲಿಂ ಬಾಹುಳ್ಯ ಗ್ರಾಮಸ್ಥರು ನಮ್ಮ ಗ್ರಾಮದಲ್ಲಿ ಹಸ್ತಕ್ಷೇಪ ಮಾಡದಂತೆ, ಗ್ರಾಮದ ಸಾಮರಸ್ಯಕ್ಕೆ ಧಕ್ಕೆ ಬರುವಂತೆ ಮಾಡುವ ಸಾಧ್ಯತೆ ಇದ್ದು, ಅದನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದರು.