ಜಿಲ್ಲಾ ರಸ್ತೆ ಸುರಕ್ಷಾ ಸಮಿತಿ ಸಭೆ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೪;  ನಗರದ ಸಂಚಾರ ದಟ್ಟಣೆ ಹಾಗೂ ಸಮಸ್ಯೆ ಕುರಿತು ಸಂಚಾರ ಠಾಣೆ ಪೊಲೀಸರು ಸಮೀಕ್ಷೆ ನಡೆಸಿ,  ಪರಿಹಾರಕ್ಕಾಗಿ ಸೂಕ್ತ ವರದಿ ಸಿದ್ಧಪಡಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಮಗ್ರ ಚರ್ಚೆ ನಡೆಸಿ, ಸಾಧಕ ಬಾಧಕಗಳನ್ನು ಅವಲೋಕಿಸಿ ಅನುಷ್ಠಾನ ಮಾಡುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಗರದ ಮುಖ್ಯ ರಸ್ತೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಬಸ್‍ಗಳ ಓಡಾಟದಿಂದ ಎಸ್.ಬಿ.ಐ ಬ್ಯಾಂಕ್ ಹಾಗೂ ಎಂ.ಜಿ ವೃತ್ತದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ.  ಸುಗಮ ಸಂಚಾರಕ್ಕೆ ಅನುಕೂಲವಾಗುಂತೆ ನಗರ ಪ್ರವೇಶಿಸುವ ಹಾಗೂ ಹೊರ ಹೋಗುವ ಖಾಸಗಿ ಹಾಗೂ ಸರ್ಕಾರಿ ಬಸ್‍ಗಳ ಸಂಚಾರ ಮಾರ್ಗಗಳಲ್ಲಿ ಮಾಡಬೇಕಾದ ಬದಲಾವಣೆ, ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳಿಗೆ ಸೂಕ್ತ  ಪಾರ್ಕಿಂಗ್ ಸ್ಥಳ ಗುರುತಿಸಿ ವರದಿ ಸಲ್ಲಿಸಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಚಳ್ಳಕೆರೆ ಗೇಟ್‍ನಲ್ಲಿ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಹೊಸ ಸಂಚಾರಿ ವೃತ್ತ ನಿಮಾರ್ಣ ಮಾಡುವ ಕುರಿತು ಲೊಕೋಪಯೋಗಿ ಹಾಗೂ ನಗರಸಭೆಯಿಂದ ಪರಿಶೀಲನೆ ನಡೆಸಬೇಕು. ರಸ್ತೆ ಸೇತುವೆ ಕೆಳಭಾಗದ ಹಾಗೂ ಇಕ್ಕೆಲಗಳಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಗೂಡಂಗಡಿಗಳನ್ನು ತೆರವುಗೊಳಿಸಬೇಕು. ಸೇತುವೆ ಕೆಳಭಾಗದಲ್ಲಿ ಪಾರ್ಕಿಂಗ್‍ಗೆ ಅವಕಾಶ ನೀಡದಂತೆ, ರಸ್ತೆಯ ಇಕ್ಕೆಲಗಳಲ್ಲಿರುವ ಖಾಲಿ ಸ್ಥಳದಲ್ಲಿ ದ್ವಿ ಚಕ್ರ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಹಾಗೂ ಚಳ್ಳಕೆರೆ ಗೇಟ್ ಬಳಿ ಬಸ್ ತಂಗುದಾಣ ನಿರ್ಮಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಕೆಳಗೋಟೆಯ ಬಸವೇಶ್ವರ ಆಸ್ಪತ್ರೆಯ ಬಳಿಯ ಹಳೆಯ ರಾಷ್ಟ್ರೀಯ ಹೆದ್ದಾರಿ ಅಪಾಯಕರ ಸ್ಥಳವಾಗಿದೆ. ಜನರು ರಸ್ತೆ ದಾಟಲು ಹೋಗಿ ಅಪಘಾತದಲ್ಲಿ ಮರಣ ಹೊಂದುತ್ತಿದ್ದಾರೆ. ಈ ಸ್ಥಳದಲ್ಲಿ 2020 ರಿಂದ 2024ರ ವರೆಗೆ ವಿವಿಧ ಅಪಘಾತದಲ್ಲಿ ಒಟ್ಟು 11 ಜನರು ಮೃತಪಟ್ಟಿದ್ದು, ಲೋಕೋಪಯೋಗಿ ಇಲಾಖೆ ವತಿಯಿಂದ ಜನರು ಹೆದ್ದಾರಿ ಪ್ರವೇಶಿಸದಂತೆ ಲೋಹದ ಮೆಸ್ ಅಳವಡಿಸಬೇಕು. ಹೀಗೆ ಅಳವಡಿಸಿದ ಮೆಸ್ ತುಂಡಾಗದಂತೆ ನಿರ್ವಹಣೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಸಭೆಯಲ್ಲಿ ಹೇಳಿದರು.ಈಗಾಗಲೇ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿದೆ. ತಕ್ಷಣವೇ ಹೆದ್ದಾರಿ ಮಧ್ಯದ ಡಿವೈಡರ್‍ಗಳಲ್ಲಿ ಬೆಳೆದಿರುವ ಗಿಡಗಳನ್ನು ಕಡಿಯುವ ಕೆಲಸವಾಗಬೇಕು.  ಸಂಚಾರಿ ಫಲಕಗಳು ಅಳವಡಿಸಬೇಕು. ಅಪಘಾತ ಕೇವಲ ಒಬ್ಬ ವ್ಯಕ್ತಿ ಸಂಬಂಧ ಪಟ್ಟದ್ದು ಅಲ್ಲ. ಅವರನ್ನು ನಂಬಿದ ಕುಟುಂಬಗಳು ಅಪಘಾತದಲ್ಲಿ ಬೀದಿಪಾಲಾಗುತ್ತಿವೆ. ಆದ್ದರಿಂದ ರಸ್ತೆ ಸುರಕ್ಷತೆಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಹೇಳಿದರು.ಸಭೆಯಲ್ಲಿ ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್, ಹೆದ್ದಾರಿ ಪ್ರಾಧಿಕಾರ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.