ವಿವಿಎನ್ ಶಾಲೆಯಲ್ಲಿ ವಿದ್ಯಾರ್ಥಿ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ
ಕಲಬುರಗಿ:ಜು.4:ದೇಶದ ಅಭಿವೃದ್ಧಿಯು ಮಾನವೀಯ ಮೌಲ್ಯಗಳನ್ನು ಹೊಂದಿದ, ನಿಸ್ವಾರ್ಥ ನಾಯಕರಿಂದ ಮಾತ್ರ ಸಾಧ್ಯ. ಇಂದಿನ ವಿದ್ಯಾರ್ಥಿ ನಾಯಕರು ಆ ನಿಟ್ಟಿನಲ್ಲಿ ಯೋಚಿಸಿ ಭವಿಷ್ಯದಲ್ಲಿ ಅಂತಹ ಸಾಮಾಜಿಕ ಜವಾಬ್ದಾರಿ ತೆಗೆದುಕೊಳ್ಳಬೇಕು, ಎಂದು ಪ್ರೊ. ಆರ್. ಕೆ. ಹುಡಗಿ ಅಭಿಪ್ರಾಯ ಪಟ್ಟರು.
ನಗರದ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ಚುನಾಯಿತ, ವಿದ್ಯಾರ್ಥಿ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರೊ. ಆರ್. ಕೆ. ಹುಡುಗಿ ಮಕ್ಕಳನ್ನುದ್ದೇಶಿಸಿ ಮಾತನಾಡುತ್ತ, ಮಕ್ಕಳಿಗೆ ಛಲವಿರಬೇಕು, ಶಾಲಾ ದಿನಗಳಿಂದಲೇ ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು, ಅವರಿಗೆ ಅಸಾಧ್ಯವಾದದ್ದು ಯಾವುದು ಇಲ್ಲ, ಎಂದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಪ್ರಿನ್ಸಿಪಾಲ್ ಸಿದ್ದಪ್ಪ ಭಗವತಿ ಮಾತನಾಡಿ, ದೇಶದ ಅಭಿವೃದ್ಧಿಗೆ ಉತ್ತಮ ನಾಯಕರ ಅಗತ್ಯವಿದೆ. ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಲು ನೀವೇ ಆ ಜವಾಬ್ದಾರಿ ತೆಗೆದುಕೊಳ್ಳಬೇಕು, ವಿಶೇಷವಾಗಿ ವಿದ್ಯಾರ್ಥಿನಿಯರು ಭವಿಷ್ಯದಲ್ಲಿ ವಿಧಾನ ಸಭೆ, ಲೋಕಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಸಿ ಉತ್ತಮ ಕಾನೂನುಗಳನ್ನು ರಚಿಸಬೇಕು ಎಂದರು.
ಕಳೆದ ವಾರ ನಡೆದ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನೀಡಿದ ಮತಗಳ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ನಾಯಕರನ್ನು ಆಯ್ಕೆ ಮಾಡಲಾಯಿತು. ಶಾಲೆಯ ನಾಯಕರಾಗಿ ಹತ್ತನೇ ತರಗತಿಯ ಭೂಮಿಕಾ ದತ್ತಾತ್ರಿ ಹಾಗೂ ಶ್ರೇಯಸ್. ಎಸ್.ಎಮ್ ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರು ಅಂಬಿಕಾ ರೆಡ್ಡಿ, ಶೈಕ್ಷಣಿಕ ಸಂಯೋಜಕರಾದ ನಿಖಿಲ್ ಪಾಟೀಲ್, ಸುಮಾ ಭಗವತಿ, ಸುಷ್ಮಾ ಭಗವತಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸಿಂಚನಾ ಸ್ವಾಗತಿಸಿದರು, ಗಂಧರ್ವ ವಂದಿಸಿದರು. ರಕ್ಷಿತ್ ನಿರೂಪಿಸಿದರು .