ಸಮನ್ವಯತೆಯ ಸಂದೇಶ ಸಾರಿದ ಮೇರು ಸಂತ ಶಿಶುನಾಳ ಶರೀಫ
ಕಲಬುರಗಿ:ಜು.4:ಯಾವುದೇ ಜಾತಿ, ಧರ್ಮ,ಪ್ರದೇಶ ದೊಡ್ಡದಲ್ಲ. ಬದಲಿಗೆ ಮಾನವೀಯತೆಯಿಂದ ಬದುಕುವದೇ ಶ್ರೇಷ್ಠ ಜೀವನವಾಗುತ್ತದೆ ಎಂದು ಪ್ರತಿಯೊಬ್ಬರು ಸೌಹಾರ್ಧತೆಯುತವಾದ ಬದುಕುವ ಕಲೆಯನ್ನು ಸಾರಿದ ಮೇರು ಸಂತ ಶಿಶುನಾಳ ಶರೀಫರು ಸಮನ್ವಯತೆಯ ಸಾಕಾರ ಮೂರ್ತಿಯಾಗಿದ್ದಾರೆ ಎಂದು ಉಪನ್ಯಾಸಕ, ಕಜಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಪಾಟೀಲ ಹೇಳಿದರು.
ನಗರದ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ ಶ್ರೇಷ್ಠ ಸಂತ ಶಿಶುನಾಳ ಶರೀಫ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಕೋಮು ಸಂಘರ್ಷಗಳುಂಟಾಗಿ ವಿಷಮಯ ವಾತವಾರಣದ ಪ್ರಸ್ತುತ ಪರಿಸ್ಥಿತಿಯಲ್ಲಿ ಶರೀಫರ ತತ್ವಗಳು ಔಷಧದಂತೆ ಕಾರ್ಯನಿರ್ವಹಿಸುತ್ತವೆ. ಇವರನ್ನು ‘ಕರ್ನಾಟಕದ ಕಬೀರ’, ‘ಜಾನಪದ ಸಂತ ಕವಿ’, ‘ಭಾವೈಕ್ಯತೆಯ ಹರಿಕಾರ’ ಎಂಬ ಮುಂತಾದ ಹೆಸರುಗಳಿಂದ ಕರೆಯುವದನ್ನು ಗಮನಿಸಿದರೆ, ಅವರ ಮೇರು ವ್ಯಕ್ತಿತ್ವ ನಮಗೆ ಕಂಡುಬರುತ್ತದೆ. ಕನ್ನಡ ಜಾನಪದ ಕೇತ್ರಕ್ಕೆ ಇವರು ನೀಡಿರುವ ಕೊಡುಗೆ ತುಂಬಾ ಅವಿಸ್ಮರಣೀಯವಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ಶರೀಫರು ಬಹು ಮೌಲ್ಯಯುತವಾದ, ತಮ್ಮ ಅನುಭವದ ಮೂಟೆಯನ್ನು ಒಳಗೊಂಡ ಪದ್ಯಗಳನ್ನು ರಚಿಸಿ, ಕನ್ನಡ ಸಾರಸತ್ವ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಪ್ರಿಯಾಂಕಾ ಉಜಳಂಬಿ, ನಿಲೊಫರ್ ಶೇಖ್, ಐಶ್ವರ್ಯ ಬಿರಾದಾರ, ಪೂಜಾ ಜಮಾದಾರ, ಪೂಜಾ ಹೂಗಾರ ಹಾಗೂ ವಿದ್ಯಾರ್ಥಿಗಳು ಇದ್ದರು.